ಪ್ರಿಯಕರನಿಗಾಗಿ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದ ಸೀಮಾ ಹೈದರ್ಗೆ ಒಲಿದು ಬಂತು ಚಿತ್ರದಲ್ಲಿ ನಟಿಸುವ ಅವಕಾಶ

ಸೀಮಾ ಹೈದರ್ (PTI)
ಹೊಸದಿಲ್ಲಿ: ಪ್ರೇಮಿಗಾಗಿ ಗಂಡನನ್ನು ತೊರೆದು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮಹಿಳೆಗೆ ಚಿತ್ರವೊಂದರಲ್ಲಿ ನಟಿಸಲು ಅವಕಾಶ ಸಿಕ್ಕಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಪಬ್-ಜಿ ಮೂಲಕ ಪ್ರಾರಂಭವಾದ ಪ್ರೀತಿಗಾಗಿ ದೇಶ ಬಿಟ್ಟು ಬಂದಿರುವ ಸೀಮಾ ಹೈದರ್ ಅವರು ಮಾಧ್ಯಮಗಳ ಗಮನ ಸೆಳೆದಿದ್ದು, ಕಳೆದ ಕೆಲವು ವಾರಗಳಿಂದ ಅವರ ಕುರಿತಾದ ಸುದ್ದಿಗಳನ್ನು ಬಹುತೇಕ ಮಾಧ್ಯಮಗಳು ವರದಿ ಮಾಡಿದ್ದವು.
ಇದೀಗ 'ಜಾನಿ ಫೈರ್ಫಾಕ್ಸ್ ಪ್ರೊಡಕ್ಷನ್ ಹೌಸ್' ತಮ್ಮ ಮುಂಬರುವ ಚಿತ್ರ 'ಎ ಟೈಲರ್ ಮರ್ಡರ್ ಸ್ಟೋರಿ'ಗಾಗಿ ಆಡಿಷನ್ ಗಾಗಿ ಸೀಮಾ ಹೈದರ್ ರನ್ನು ಭೇಟಿಯಾಗಿದೆ. ಈ ಚಿತ್ರದಲ್ಲಿ ಸೀಮಾ ಹೈದರ್ ಅವರು ರಾ ಏಜೆಂಟ್ ಆಗಿ ಬಣ್ಣ ಹಚ್ಚಲು ಚಿತ್ರತಂಡವು ಅವರನ್ನು ಸಂಪರ್ಕಿಸಿದೆ.
ಸೀಮಾ ಹೈದರ್ ಅವರು ಭಾರತ ಪ್ರವೇಶಿಸಿದ ಐಎಸ್ಐ ಏಜೆಂಟ್ ಎಂಬ ವದಂತಿಗಳ ನಡುವೆ ಅವರಿಗೆ ರಾ ಏಜೆಂಟ್ ಪಾತ್ರಕ್ಕೆ ಬಣ್ಣ ಹಚ್ಚಲು ಅವಕಾಶ ಸಿಕ್ಕಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ. ಚಿತ್ರದ ನಿರ್ದೇಶಕರಾದ ಜಯಂತ್ ಸಿನ್ಹಾ ಮತ್ತು ಭರತ್ ಸಿಂಗ್ ಅವರು ಸೀಮಾ ಹೈದರ್ ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಪಾಕಿಸ್ತಾನದ 30 ವರ್ಷದ ಮಹಿಳೆ ಸೀಮಾ ಹೈದರ್ ಅವರು ಕೋವಿಡ್ -19 ಸಮಯದಲ್ಲಿ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುವ 22 ವರ್ಷದ ಭಾರತೀಯ ಸಚಿನ್ ಮೀನಾ ಜೊತೆ PUBG ಆಡುತ್ತಾ ಗೆಳೆತನ ಶುರುವಾಗಿದ್ದು, ಪ್ರೀತಿಗೆ ಬದಲಾಗಿತ್ತು. ತನ್ನ ಪ್ರಿಯಕರನೊಂದಿಗೆ ಜೀವನ ನಡೆಸುವ ಉದ್ದೇಶದಿಂದ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದರೂ ಸಹ, ಸೀಮಾ ಪಾಕಿಸ್ತಾನವನ್ನು ತೊರೆದು ಕಾನೂನುಬಾಹಿರವಾಗಿ ಭಾರತದ ಗಡಿಯನ್ನು ದಾಟಿದ್ದರು.







