ಶಾರುಖ್ ಖಾನ್ ‘ಸಿನೆಮಾದ ದೇವರುʼ: ‘ಜವಾನ್’ ಚಿತ್ರಕ್ಕೆ ನಟಿ ಕಂಗನಾ ಶ್ಲಾಘನೆ

ಶಾರೂಖ್ ಖಾನ್, ಕಂಗನಾ ರಣಾವತ್ | Photo: PTI
ಮುಂಬೈ: ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಇದೀಗ ಶಾರೂಖ್ ಖಾನ್ರನ್ನು ಹೊಗಳಿದ್ದು, ಶಾರೂಖ್ ಸಿನೆಮಾಗಳನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದ ಬಲಪಂಥೀಯರಿಗೆ ತೀವ್ರ ಮುಜುಗರ ಆಗಿದೆ.
ಶಾರುಖ್ ಖಾನ್ ಅವರ ಜವಾನ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿರುವ ನಡುವೆಯೇ ಕಂಗನಾ ರಣಾವತ್ ಅವರು ಶಾರುಖ್ ಖಾನ್ ಅವರನ್ನು ಶ್ಲಾಘಿಸಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಜವಾನ್ ಚಿತ್ರತಂಡಕ್ಕೆ ಅಭಿನಂದಿಸಿದ ಕಂಗನಾ, ‘ಶಾರುಖ್ ಭಾರತಕ್ಕೆ ಅಗತ್ಯವಿರುವ ಸಿನಿಮಾ ದೇವರುʼ ಎಂದು ಹೇಳಿದ್ದಾರೆ.
ಜವಾನ್ನ ಪೋಸ್ಟರ್ ಅನ್ನು ಹಂಚಿಕೊಂಡಿರುವ ಅವರು ಶಾರುಖ್ರನ್ನು ಹೊಗಳಿ, ದೊಡ್ಡ ಟಿಪ್ಪಣಿಯನ್ನೇ ಬರೆದಿದ್ದಾರೆ.
“ತೊಂಬತ್ತರ ದಶಕದ ಹೊತ್ತಿಗೆ ಲವರ್ ಬಾಯ್ ಆಗಿ ಪ್ರೇಕ್ಷಕರನ್ನು ರಂಜಿಸಿ, ತನ್ನ ನಲವತ್ತರ ದಶಕದ ಮಧ್ಯದಿಂದ ಐವತ್ತರ ದಶಕದ ಮಧ್ಯದವರೆಗೆ ತನ್ನ ಪ್ರೇಕ್ಷಕರನ್ನು ತಲುಪಲು ಹೆಣಗಾಡಿ, ಅಂತಿಮವಾಗಿ ತನ್ನ 60 ನೇ ವರ್ಷದ ಹೊತ್ತಿಗೆ ಬಹುತೇಕ ಭಾರತೀಯ ಮಾಸ್ ಸೂಪರ್ ಹೀರೋ ಆಗಿ ತನ್ನನ್ನು ತಾನು ಮರು ಶೋಧಿಸಿಕೊಳ್ಳುವುದು ಯಾವುದೇ ಸೂಪರ್ ಹೀರೋಗಿಂತ ಕಡಿಮೆ ಸಾಧನೆಯೇನಲ್ಲ” ಎಂದು ಕಂಗನಾ ಬರೆದುಕೊಂಡಿದ್ದಾರೆ.
“ಜನರು ಅವರ ಸಿನಿಮಾ ಆಯ್ಕೆಯ ಬಗ್ಗೆ ಲೇವಡಿ ಮಾಡಿದ ಸಮಯ ನನಗೆ ನೆನಪಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಮರುಸ್ಥಾಪಿತಗೊಳ್ಳಬೇಕು ಎಂದು ಕನಸು ಕಾಣುತ್ತಿರುವ ಎಲ್ಲಾ ಕಲಾವಿದರಿಗೆ ಶಾರುಖ್ ಖಾನ್ ಅವರು ಮಾದರಿ. ಶಾರುಖ್ ಖಾನ್ ಸಿನಿಮಾ ದೇವರು. ಕಠಿಣ ಪರಿಶ್ರಮ ಮತ್ತು ನಮ್ರತೆಗೆ ಕಿಂಗ್ ಖಾನ್ ನಿಮಗೆ ನಮನಗಳು " ಎಂದು ಕಂಗನಾ ಬರೆದಿದ್ದಾರೆ.