ವಿಶ್ವದ 100 ಶ್ರೇಷ್ಠ ಕಲಾವಿದರ ಪಟ್ಟಿಯಲ್ಲಿ ಶಾರುಖ್ ಖಾನ್
► ಪಟ್ಟಿಯಲ್ಲಿ ಸ್ಥಾನಪಡೆದ ಏಕೈಕ ಭಾರತೀಯ

ಶಾರುಖ್ ಖಾನ್ (Photo: PTI)
‘ವೆರೈಟಿ’ ನಿಯತಕಾಲಿಕೆಯ ಸಾರ್ವಕಾಲಿಕ ಶ್ರೇಷ್ಠ 100 ಸಿನಿಮಾ ತಾರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟರಾಗಿದ್ದಾರೆ ಶಾರುಖ್ ಖಾನ್. ಈ ಪಟ್ಟಿಯಲ್ಲಿ ಅವರು 92ನೇ ಸ್ಥಾನದಲ್ಲಿದ್ದಾರೆ.
ಶಾರುಖ್ ಖಾನ್ ಪ್ರಸಿದ್ಧಿಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ. ದಿಗ್ಗಜ ಸಿನಿಮಾ ನಟ-ನಟಿಯರು ಇರುವ ವಿಶ್ವಮಟ್ಟದ ಕಲಾವಿದರ ಪಟ್ಟಿಯಲ್ಲಿ ಸ್ಥಾನಪಡೆದ ಹಿರಿಮೆ ಪಡೆದುಕೊಂಡಿದ್ದಾರೆ. ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಭಾರತೀಯ ಚಿತ್ರರಂಗದ ಖ್ಯಾತಿಯನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಿರುವ ನಟ. ಇದೀಗ ಅವರು ವಿಶ್ವದ ಸಾರ್ವಕಾಲಿಕ 100 ಶ್ರೇಷ್ಟ ಸಿನಿಮಾ ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
‘ವೆರೈಟಿ’ ನಿಯತಕಾಲಿಕೆಯ ಸಾರ್ವಕಾಲಿಕ ಶ್ರೇಷ್ಠ 100 ಸಿನಿಮಾ ತಾರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟರಾಗಿದ್ದಾರೆ. ಈ ಪಟ್ಟಿಯಲ್ಲಿ ಅವರು 92ನೇ ಸ್ಥಾನದಲ್ಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ‘ದೇವದಾಸ್’ ಸಿನಿಮಾವನ್ನು ಶಾರುಖ್ ಅವರ ಅತ್ಯಂತ ಪ್ರಾತಿನಿಧಿಕ ಕೃತಿ ಎಂದು ಉಲ್ಲೇಖಿಸಲಾಗಿದೆ. ಬೇರೆ ಯಾವುದೇ ಭಾಷೆಯ ಅಥವಾ ಪೀಳಿಗೆಯ ಭಾರತೀಯ ನಟರು ಈ ಪಟ್ಟಿಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಯಾರಿದ್ದಾರೆ?
ಈ ಪಟ್ಟಿಯಲ್ಲಿ ಬಹುತೇಕ ಹಾಲಿವುಡ್ ನಟರೇ ಸೇರಿದ್ದಾರೆ. ಏಷ್ಯಾದ ಕೆಲವು ನಟರೂ ಇದ್ದಾರೆ. ಹೆಚ್ಚಾಗಿ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಹಾಲಿವುಡ್ನ ಹಲವು ದಿಗ್ಗಜ ಕಲಾವಿದರು ಸ್ಥಾನ ಪಡೆದಿದ್ದಾರೆ.
ಪಟ್ಟಿಯಲ್ಲಿ ಮರ್ಲಿನ್ ಮನ್ರೋ ಅಗ್ರಸ್ಥಾನದಲ್ಲಿದ್ದಾರೆ (1ನೇ ಸ್ಥಾನ). ಮೊದಲ ಹತ್ತು ಸ್ಥಾನಗಳಲ್ಲಿ ಉಳಿದಂತೆ, ಹಂಫ್ರೆ ಬೋಗಾರ್ಟ್ (2ನೇ), ಚಾರ್ಲಿ ಚಾಪ್ಲಿನ್ (3ನೇ), ಜ್ಯಾಕ್ ನಿಕಲ್ಸನ್ (4ನೇ), ಕ್ಯಾಥರೀನ್ ಹೆಪ್ಬರ್ನ್ (5ನೇ), ಸಿಡ್ನಿ ಪೊಯಿಟಿಯರ್ (6ನೇ), ಮಾರ್ಲನ್ ಬ್ರಾಂಡೊ (7ನೇ), ಟಾಮ್ ಕ್ರೂಸ್ (8ನೇ), ಜಪಾನೀಸ್ ಚಿತ್ರರಂಗದ ದಿಗ್ಗಜ ತೋಷಿರೋ ಮಿಫುನೆ (9ನೇ) ಮತ್ತು ಬಾರ್ಬ್ರಾ ಸ್ಟ್ರೈಸಂಡ್ (10ನೇ) ಸ್ಥಾನ ಪಡೆದಿದ್ದಾರೆ. ಸಮಕಾಲೀನ ನಟ-ನಟಿಯರ ಪೈಕಿ, ಜೂಲಿಯಾ ರಾಬರ್ಟ್ಸ್ 13ನೇ ಸ್ಥಾನದಲ್ಲಿದ್ದರೆ, ಆಡ್ರೆ ಹೆಪ್ಬರ್ನ್ 26ನೇ, ರಾಬರ್ಟ್ ಡೌನಿ ಜೂನಿಯರ್ 74ನೇ, ರಯಾನ್ ಗೋಸ್ಲಿಂಗ್ 77ನೇ, ರಾಬರ್ಟ್ ಪ್ಯಾಟಿನ್ಸನ್ 83ನೇ, ತಿಮೋತಿ ಚಾಲಮೆಟ್ 86ನೇ, ಎಮ್ಮಾ ಸ್ಟೋನ್ 94ನೇ ಮತ್ತು ಝೆಂಡಾಯಾ 98ನೇ ಸ್ಥಾನದಲ್ಲಿದ್ದಾರೆ.
ಹಿಂದೆಯೂ ವಿಶ್ವದ ಗಣ್ಯರ ಸಾಲಿನಲ್ಲಿ ಸ್ಥಾನ
2008ರಲ್ಲಿ ನ್ಯೂಸ್ವೀಕ್ ನಿಯತಕಾಲಿಕೆಯು ಶಾರುಖ್ ಖಾನ್ ಅವರನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ 50 ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಿತ್ತು. 2022ರಲ್ಲಿ ಎಂಪೈರ್ ಮ್ಯಾಗಝಿನ್ ಓದುಗರು ಅವರನ್ನು ಸಾರ್ವಕಾಲಿಕ ಶ್ರೇಷ್ಟ 50 ನಟರಲ್ಲಿ ಒಬ್ಬರೆಂದು ಆಯ್ಕೆ ಮಾಡಿದ್ದರು. ಆ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಅವರಾಗಿದ್ದರು. 2023ರಲ್ಲಿ ಟೈಮ್ ನಿಯತಕಾಲಿಕೆಯು ಅವಸರನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಿತು.
ಶಾರುಖ್ ಏಕೆ ಪಟ್ಟಿಯಲ್ಲಿದ್ದಾರೆ?
ಶಾರುಖ್ ಅವರ ದೀರ್ಘಕಾಲದ ಸಿನಿಮಾ ಪಯಣ, ಅಭಿನಯದ ವೈವಿಧ್ಯತೆ ಮತ್ತು ಜಾಗತಿಕ ಮಟ್ಟದಲ್ಲಿ ಅವರು ಗಳಿಸಿರುವ ಜನಪ್ರಿಯತೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಶಾರುಖ್ ಖಾನ್ ಅವರು ಎಮ್ಮಾ ಸ್ಟೋನ್ ಮತ್ತು ಝೆಂಡಯಾ ಅವರಿಗಿಂತ ಮುಂದಿದ್ದಾರೆ. ತಿಮೊತಿ ಚಾಲಮೆಟ್ ಮತ್ತು ರಾಬರ್ಟ್ ಪ್ಯಾಸಿನ್ಸನ್ ಅವರೊಂದಿಗೆ ಒಂದೇ ಶ್ರೇಣಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಜೋಕ್ವಿನ್ ಫೀನಿಕ್ಸ್ (93ನೇ), ನಿಕೋಲಸ್ ಕೇಜ್ (89ನೇ) ಮತ್ತು ಕೇಟ್ ವಿನ್ಸ್ಲೆಟ್ (84ನೇ) ಕೂಡ ಇದ್ದಾರೆ. 4ನೇ ಸ್ಥಾನದಲ್ಲಿರುವ ಜ್ಯಾಕ್ ನಿಕಲ್ಸನ್, ಈ ಪಟ್ಟಿಯಲ್ಲಿರುವ ಜೀವಂತ ತಾರೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದವರಾಗಿದ್ದಾರೆ.
ಶಾರುಖ್ ಖಾನ್ ವೃತ್ತಿ ಜೀವನ
ಶಾರುಖ್ ಖಾನ್ ತಮ್ಮ ವೃತ್ತಿಜೀವನವನ್ನು 1980ರ ದಶಕದ ಅಂತ್ಯದಲ್ಲಿ ದೂದರ್ಶನ ಕಾರ್ಯಕ್ರಮಗಳ ಮೂಲಕ ಪ್ರಾತಂಭಿಸಿದವರು. ನಂತರ ‘ದಿವಾನಾ’ ಸಿನಿಮಾದ ಮೂಲಕ ಬಾಲಿವುಡ್ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ಕಳೆದ ಮೂರು ದಶಕಗಳಲ್ಲಿ ಅವರು ವಿಶ್ವದ ಅತ್ಯಂತ ವಾಣಿಜ್ಯಿಕವಾಗಿ ಯಶಸ್ವಿ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಸಿನಿಮಾ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಕಿಂಗ್ ಖಾನ್ ಮತ್ತು ಬಾಲಿವುಡ್ ಬಾದ್ಶಾ ಮೊದಲಾದ ಬಿರುದು ಪಡೆದಿದ್ದಾರೆ. ಅವತು 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2018 ಮತ್ತು 2022ರ ನಡುವೆ ಕಮರ್ಶಿಯಲ್ ಯಶಸ್ಸಿನಲ್ಲಿ ಹಿನ್ನಡೆ ಸಾಧಿಸಿದ ಅವರು ನಂತರ 2023ರಲ್ಲಿ 'ಪಠಾನ್', 'ಜವಾನ್' ಮತ್ತು 'ಡಂಕಿ' ಎಂಬ ಸತತ ಮೂರು ಹಿಟ್ ಸಿನಿಮಾಗಳ ಜೊತೆಗೆ ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ಗಮನಾರ್ಹ ಮರುಪ್ರವೇಶ ಮಾಡಿದರು.
ಅವರು ಇದೀಗ ‘ಕಿಂಗ್’ ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾವು ಡಿಸೆಂಬರ್ 24ರಂದು ಬಿಡುಗಡೆಯಾಗಲಿದ್ದು, ಅದರಲ್ಲಿ ಅವರ ಪುತ್ರಿ ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ.






