ಕ್ರಿಸ್ಮಸ್‌ಗೆ ಬರಲಿದೆ ಶಾರುಖ್ ಖಾನ್ ಅಭಿನಯದ ‘ಕಿಂಗ್’

ಶಾರುಖ್ ಖಾನ್ ‘ಕಿಂಗ್’ ಆಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕಾಗಿ ಈ ವರ್ಷದ ಅಂತ್ಯದವರೆಗೆ ಕಾಯಬೇಕಿದೆ. ‘ಕಿಂಗ್’ ಚಿತ್ರದ ಒಂದು ಝಲಕ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ಚಿತ್ರದ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.
ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್ ಖಾನ್ ಕೆಲಕಾಲ ಪರದೆಯಿಂದ ದೂರವಾಗಿದ್ದರು. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಚಿತ್ರಗಳು ಒಂದೇ ವರ್ಷದಲ್ಲಿ ತೆರೆಗಪ್ಪಳಿಸಿ ಭರ್ಜರಿ ಯಶಸ್ಸು ಕಂಡಿದ್ದವು. ಆ ಬಳಿಕ ‘ಕಿಂಗ್’ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಇದೇ ವರ್ಷ ಕ್ರಿಸ್ಮಸ್ ಗೆ ‘ಕಿಂಗ್’ ಬಿಡುಗಡೆಯಾಗಲಿದೆ ಎಂದು ಶಾರುಖ್ ಖಾನ್ ಘೋಷಿಸಿದ್ದಾರೆ.
‘ಪಠಾಣ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ‘ಕಿಂಗ್’ 2026 ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ. ‘ಪಠಾಣ್’ ಬ್ಲಾಕ್‌ಬಸ್ಟರ್ ಚಿತ್ರದ ಮೂರನೇ ವಾರ್ಷಿಕೋತ್ಸವದ ಮುನ್ನವೇ ‘ಕಿಂಗ್’ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅನಿಲ್ ಕಪೂರ್, ಜಾಕಿ ಶ್ರಾಫ್, ರಾಣಿ ಮುಖರ್ಜಿ ಸೇರಿದಂತೆ ಇನ್ನೂ ಹಲವರು ನಟಿಸಿದ್ದಾರೆ.
ವಿಎಫ್‌ಎಕ್ಸ್ ಚಿತ್ರದಲ್ಲಿನ ಪ್ರಮುಖ ಆಕರ್ಷಣೆಯಾಗಿರಲಿದೆ. ಅನಿರುದ್ಧ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲೇ ‘ಕಿಂಗ್’ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮುಂಬೈ ಮತ್ತು ವರ್ಸಾವ್ ಲೊಕೇಶನ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಇದೇ ಕ್ರಿಸ್ಮಸ್ ಸಂದರ್ಭದಲ್ಲಿ ಹಾಲಿವುಡ್‌ನ ಮಾರ್ವೆಲ್ ಸಿನಿಮಾ ‘ಅವೆಂಜರ್ಸ್: ಡೂಮ್ಸ್‌ಡೇ’ ಕೂಡ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ‘ಕಿಂಗ್’ ಮತ್ತು ಮಾರ್ವೆಲ್ ಚಿತ್ರದ ನಡುವೆ ಬಾಕ್ಸ್‌ಆಫೀಸ್ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.







