ಟಾಲಿವುಡ್ ಗೆ ಶಿವಣ್ಣ ಎಂಟ್ರಿ: ಐದು ಬಾರಿಯ ಶಾಸಕ ಗುಮ್ಮಡಿ ನರಸಯ್ಯ ಜೀವನಾಧಾರಿತ ಚಿತ್ರದಲ್ಲಿ ನಟನೆ

ಶಿವರಾಜ್ ಕುಮಾರ್
ಬೆಂಗಳೂರು: ಕನ್ನಡ ಚಿತ್ರಪ್ರೇಮಿಗಳಿಂದ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಎಂಬ ಅಭಿಮಾನಕ್ಕೆ ಪಾತ್ರರಾಗಿರುವ ಶಿವರಾಜ್ ಕುಮಾರ್, ತಮ್ಮ 63ನೇ ಹರೆಯದಲ್ಲಿ ಇದೇ ಮೊದಲ ಬಾರಿಗೆ ಟಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವಿಭಜಿತ ಆಂಧ್ರ ಪ್ರದೇಶದಲ್ಲಿ ಐದು ಬಾರಿ ಶಾಸಕರಾಗಿದ್ದ ಗುಮ್ಮಡಿ ನರಸಯ್ಯ ಜೀವನಾಧಾರಿತ ಚಿತ್ರದಲ್ಲಿ ಅವರು ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
ಈ ಚಿತ್ರವನ್ನು ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಎನ್.ಸುರೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಪರಮೇಶ್ವಿರ್ ಹಿವ್ರಾಲೆ ನಿರ್ದೇಶಿಸುತ್ತಿದ್ದಾರೆ. ಬಿಳಿ ಬಣ್ಣದ ಕುರ್ತಾ, ಪೈಜಾಮ ಧರಿಸಿ, ಹೆಗಲ ಮೇಲೆ ಕೆಂಪು ಶಾಲು ಧರಿಸಿರುವ ಶಿವರಾಜ್ ಕುಮಾರ್ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಸಿಪಿಐ (ಎಂಎಲ್) ಧ್ವಜವನ್ನು ಸಿಕ್ಕಿಸಿರುವ ಸೈಕಲ್ ಹಿಡಿದು ಶಿವರಾಜ್ ಕುಮಾರ್ ನಡೆದು ಹೋಗುತ್ತಿರುವಂತೆ ಈ ಪೋಸ್ಟರ್ ಅನ್ನು ಮುದ್ರಿಸಲಾಗಿದೆ.
ನಿರ್ದೇಶಕ ಪರಮೇಶ್ವರರ್ ಹಿವ್ರಾಲೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯ ಪ್ರತಿಮೆಗಳ ಚಿತ್ರವಿದೆ. ಜೊತೆಗೆ ಭಾರತದ ಸಂವಿಧಾನದ ಮುಖಪುಟ ಮತ್ತು ಆಂಧ್ರಪ್ರದೇಶ ವಿಧಾನಸಭೆಯ ಚಿತ್ರವನ್ನೂ ಮುದ್ರಿಸಲಾಗಿದೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಅವಿಭಜಿತ ಆಂಧ್ರಪ್ರದೇಶ ರಾಜ್ಯವಿದ್ದಾಗ, ಈಗಿನ ತೆಲಂಗಾಣದ ಯೆಲಾಂಡು ವಿಧಾನಸಭಾ ಕ್ಷೇತ್ರದಿಂದ ಸಿಪಿಐ (ಎಂಎಲ್) ಶಾಸಕರಾಗಿ ಗುಮ್ಮಡಿ ನರಸಯ್ಯ ಐದು ಬಾರಿ ಆಯ್ಕೆಯಾಗಿದ್ದರು. ತಮ್ಮ ಸರಳತೆ ಹಾಗೂ ಕ್ರಿಯಾಶೀಲತೆಯಿಂದ ಅಪಾರ ಜನಪ್ರಿಯತೆ ಹೊಂದಿದ್ದ ಅವರು, ವಿಧಾನಸಭೆಗೆ ಸೈಕಲ್ ನಲ್ಲೇ ಆಗಮಿಸುತ್ತಿದ್ದರು. ಐದು ಬಾರಿ ಶಾಸಕರಾದರೂ, ಐಷಾರಾಮಿ ಬದುಕಿನ ಮೋಹಕ್ಕೆ ಬಲಿಯಾಗದೆ ಸಾಮಾನ್ಯ ಜೀವನ ನಡೆಸಿ, ಜನಾನುರಾಗಿ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದರು. ತಮ್ಮ ನಿಸ್ವಾರ್ಥ ಸಾಮಾಜಿಕ ಮತ್ತು ರಾಜಕೀಯ ಜೀವನದಿಂದಾಗಿ ಅವರೀಗಲೂ ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರ ಮನಸ್ಸಿನಲ್ಲಿ ಸ್ಮರಣೀಯರಾಗಿ ಉಳಿದಿದ್ದಾರೆ.







