ಪ್ರಧಾನಿ ಮೋದಿಯವರನ್ನೊಳಗೊಂಡ ಸಿರಿಧಾನ್ಯಗಳ ಕುರಿತ ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ

ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಿರುವ ಸಿರಿಧಾನ್ಯಗಳ ಕುರಿತ ಹಾಡನ್ನು 2024ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿಗಳಿಗಾಗಿ ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ‘ಅಬಂಡನ್ಸ್ ಆಫ್ ಮಿಲೆಟ್ಸ್ ’ಎಂಬ ಶೀರ್ಷಿಕೆಯ ಈ ಹಾಡು ಸಿರಿಧಾನ್ಯಗಳ ಆರೋಗ್ಯ ಲಾಭ ಮತ್ತು ಅವುಗಳನ್ನು ಉತ್ತೇಜಿಸಲು ಸರಕಾರದ ಪ್ರಯತ್ನಗಳ ಬಗ್ಗೆ ಹೇಳುತ್ತದೆ. ಹಾಡನ್ನು ಇಂಡಿಯನ್-ಅಮೆರಿಕನ್ ಗ್ರ್ಯಾಮಿ ವಿಜೇತ ಗಾಯಕಿ ಫಲು (ಫಲ್ಗುಣಿ ಶಾ) ಮತ್ತು ಅವರ ಪತಿ, ಗಾಯಕ ಗೌರವ ಶಾ ಅವರು ಹಾಡಿದ್ದಾರೆ.
ಅರೂಫ್ ಅಫ್ತಾಬ್, ವಿಜಯ ಅಯ್ಯರ್ ಮತ್ತು ಶಹಜಾದ್ ಇಸ್ಮಾಯಿಲಿ ಅವರ ‘ಶ್ಯಾಡೋ ಫೋರ್ಸಸ್ ’,ಬರ್ನಾ ಬಾಯ್ ಅವರ ‘ಅಲೋನ್’,ಡೇವಿಡೋರ ‘ಫೀಲ್’,ಸಿಲ್ವಾನಾ ಎಸ್ತ್ರಡಾ ಅವರ ‘ಮಿಲಾಗ್ರೋ ವೈ ಡಿಸಾಸ್ಟ್ರ’,ಬೇಲಾ ಫ್ಲೆಕ್,ಎಡ್ಗರ್ ಮೆಯರ್ ಮತ್ತು ಝಾಕಿರ್ ಹುಸೇನ್ ಅವರ ‘ಪಶ್ತೋ’,ಇಬ್ರಾಹಿಂ ಮಾಲುಫ್ ಮತ್ತು ಬಂಗಾ ಅವರ ‘ಟೋಡೊ ಕಲರ್ಸ್‘ ಇವೂ ‘ಅಬಂಡನ್ಸ್ ಆಫ್ ಮಿಲೆಟ್ ’ನೊಂದಿಗೆ ನಾಮ ನಿರ್ದೇಶನಗೊಂಡಿವೆ.
2023ನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ’ಎಂದು ಘೋಷಿಸಲಾಗಿದೆ. ಭಾರತವು ಇದಕ್ಕಾಗಿ ಪ್ರಸ್ತಾವವನ್ನು ಸಲ್ಲಿಸಿದ್ದು,ವಿಶ್ವಸಂಸ್ಥೆಯ ಕೃಷಿ ಮತ್ತು ಆಹಾರ ಸಂಸ್ಥೆ (ಎಫ್ಎಒ) ಹಾಗೂ 75ನೇ ವಿಶ್ವಸಂಸ್ಥೆಯ ಸಾಮಾನ್ಯಸಭೆ ಪ್ರಸ್ತಾವವನ್ನು ಅನುಮೋದಿಸಿದ್ದವು.
ಫಲು ಎಂದೇ ಪರಿಚಿತರಾಗಿರುವ ಮುಂಬೈ ಸಂಜಾತೆ ಗಾಯಕಿ ಮತ್ತು ಕವಯಿತ್ರಿ ಫಲ್ಗುಣಿ ಶಾಹ್ ಮತ್ತು ಅವರ ಪತಿ, ಗಾಯಕ ಗೌರವ ಶಾ ಅವರು ಜೂನ್ನಲ್ಲಿ ‘ಅಬಂಡನ್ಸ್ ಆಫ್ ಮಿಲೆಟ್ಸ್ ’ನ್ನು ಬಿಡುಗಡೆಗೊಳಿಸಿದ್ದರು. ಪ್ರಧಾನಿ ಮೋದಿಯವರು ತನ್ನೊಂದಿಗೆ ಮತ್ತು ತನ್ನ ಪತಿಯೊಂದಿಗೆ ಸೇರಿ ಈ ಹಾಡನ್ನು ಬರೆದಿದ್ದಾರೆ ಎಂದು ಫಲ್ಗುಣಿ ಶಾ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.







