ಸಂಗೀತ ಕಾರ್ಯಕ್ರಮದ ನಡುವೆ ಆರೋಗ್ಯದಲ್ಲಿ ದಿಢೀರ್ ಏರುಪೇರು: ಗಾಯಕ ಸೋನು ನಿಗಮ್ ಆಸ್ಪತ್ರೆಗೆ ದಾಖಲು

Screengrab:instagram/sonunigamofficial
ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ರವಿವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿವಾರ ಪುಣೆಯಲ್ಲಿ ಆಯೋಜನೆಗೊಂಡಿದ್ದ ಸಂಗೀತ ಕಾರ್ಯಕ್ರಮದ ನಡುವೆ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ರವಿವಾರ ಆಯೋಜನೆಗೊಂಡಿದ್ದ ಸಂಗೀತ ಕಾರ್ಯಕ್ರಮದ ವೇಳೆ ಸೋನು ನಿಗಮ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಿದ್ದೂ, ಸಂಗೀತ ಕಾರ್ಯಕ್ರಮ ಮುಂದುವರಿಸಿದ ಸೋನು ನಿಗಮ್ ರ ಬೆನ್ನು ನೋವು ಉಲ್ಬಣಗೊಂಡಿದ್ದರಿಂದ, ಅವರನ್ನು ಸಂಗೀತ ಕಾರ್ಯಕ್ರಮದ ನಡುವೆಯೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಕುರಿತು ಖುದ್ದು ಸೋನು ನಿಗಮ್ ವಿಡಿಯೊವೊಂದನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು, “ನಾನು ಸಂಗೀತ ಕಾರ್ಯಕ್ರಮದ ವೇಳೆ ವೇದಿಕೆಯ ಮೇಲೆ ತುಂಬಾ ಓಡಾಡಿ ಹಾಡುತ್ತೇನೆ. ಅದೇ ರೀತಿ ರವಿವಾರ ನಡೆದ ಕಾರ್ಯಕ್ರಮದಲ್ಲೂ ವೇದಿಕೆ ತುಂಬೆಲ್ಲಾ ಓಡಾಡಿಕೊಂಡು ಹಾಡುತ್ತಿದ್ದೆ. ಆಗ ಒಮ್ಮೆಲೆ ಬೆನ್ನು ಕಾಣಿಸಿಕೊಂಡಿತು. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸದೆ ಸಂಗೀತ ಕಾರ್ಯಕ್ರಮವನ್ನು ಮುಂದುವರಿಸಿದೆ. ಆದರೆ, ಬೆನ್ನು ನೋವು ಉಲ್ಬಣಗೊಂಡಿತು. ಯಾರೋ ಬೆನ್ನಿಗೆ ಇಂಜೆಕ್ಷನ್ ಚುಚ್ಚಿದ ರೀತಿಯ ಅನುಭವವಾಗತೊಡಗಿತು” ಎಂದು ಹೇಳಿಕೊಂಡಿದ್ದಾರೆ.
ಸದ್ಯ ಸೋನು ನಿಗಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಲಾಗಿದೆ.







