ಗ್ರಾಂಗಟ್ಟಲೆ ಗ್ರಾಮದ ಕಥೆಗಳು..!

ಚಿತ್ರ: ಗ್ರಾಮಾಯಣ
ನಿರ್ದೇಶನ: ದೇವನೂರು ಚಂದ್ರು
ನಿರ್ಮಾಪಕರು: ಲಹರಿ ವೇಲು, ಜಿ.ಮನೋಹರನ್, ನವೀನ್ ಮನೋಹರನ್
ತಾರಾಗಣ: ವಿನಯ್ ರಾಜ್ ಕುಮಾರ್, ಮೇಘಾ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು.
ಅದೊಂದು ಹಳ್ಳಿ. ಆ ಹಳ್ಳಿಗೊಬ್ಬ ಭ್ರಷ್ಟ ಶಾಸಕ. ಮತ್ತೋರ್ವ ದುಷ್ಟ ರಾಜಕಾರಣಿ. ಇವರ ವಿರುದ್ಧ ಈಜಿ ಆ ಗ್ರಾಮದಲ್ಲೇ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವ ಯುವಕ. ಈ ಕೆಟ್ಟ ಪ್ರವಾಹದ ವಿರುದ್ಧದ ಈಜಾಟ ಹೇಗೆಲ್ಲ ಸಾಗುತ್ತದೆ ಎನ್ನುವುದನ್ನು ತೋರಿಸಿರುವ ಚಿತ್ರ ಗ್ರಾಮಾಯಣ.
ಸೀನನನ್ನು ಆ ಹಳ್ಳಿಯವರೆಲ್ಲ ಸಿಕ್ಸ್ತ್ ಸೆನ್ಸ್ ಸೀನ ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣ ವಿದ್ಯಾಭ್ಯಾಸ ಇರುವ ಆತನಿಗೆ ಸ್ವಲ್ಪ ಸಾಮಾನ್ಯ ಜ್ಞಾನ ಇದೆ. ಉಳಿದವರಿಗೆ ಅದು ಕೂಡ ಇರುವುದಿಲ್ಲ. ಉಳಿದಂತೆ ಅದೇ ಹಳ್ಳಿಯಲ್ಲೇ ಕುಸುಮಾ ಎನ್ನುವ ಯುವತಿ ಪಿಯುಸಿ ಕಲಿತರೂ ಹೊಲ, ಗದ್ದೆಯಲ್ಲಿ ಗಂಡಸಿನಂತೆ ದುಡಿಯುತ್ತಿರುತ್ತಾಳೆ. ಸೀನ ಮತ್ತು ಕುಸುಮ ಪ್ರೀತಿಯ ಕನಸು ಕಾಣುತ್ತಾರೆ. ಆದರೆ ಸೀನನಿಗೆ ಒಂದು ಭದ್ರವಾದ ಕೆಲಸವಿಲ್ಲ.
ಗ್ರಾಮಾಯಣ ಚಿತ್ರದ ಆರಂಭದಲ್ಲೇ ಹೇಳುವ ಹಾಗೆ ಇದು ಊರುಕೇರಿಯ ಕತೆ. ಹೀಗಾಗಿ ಸೀನ ಮತ್ತು ಆತನ ಸುತ್ತಮುತ್ತಲಿನ ಒಟ್ಟು ಘಟನೆಗಳನ್ನು ತೋರಿಸಲಾಗಿದೆ. ಅದರ ಹೊರತಾಗಿ ಕಥೆಯನ್ನು ಯಾವುದೋ ಒಂದು ವಿಚಾರಕ್ಕೆ ಮಾತ್ರ ಕೇಂದ್ರವಾಗಿಸಿಲ್ಲ. ಹೀಗಾಗಿಯೇ ಸೀನ ಮತ್ತು ತಾಯಿಯ ಸಂಬಂಧ, ಸೀನ ಮತ್ತು ತಂದೆಯ ಸಂಬಂಧ, ಸೀನ ಮತ್ತು ಪ್ರೇಯಸಿಯ ಅನುಬಂಧ ಇದು ಯಾವುದರಲ್ಲೂ ಒಂದು ಹೊಸ ಬದಲಾವಣೆ ಸಿಗುವುದಿಲ್ಲ. ಏನೇ ಏರಿಳಿತಗಳಿದ್ದರೂ ಸಂಬಂಧಗಳು ಆರಕ್ಕೆ ಏರುವುದಿಲ್ಲ. ಮೂರಕ್ಕೆ ಇಳಿಯುವುದಿಲ್ಲ. ಹೀಗಾಗಿಯೇ ತಂದೆಯ ಚಪ್ಪಲಿ ಏಟು ತಿನ್ನುವ ಕುಸುಮಾ, ತಾಯಿಯ ಪೊರಕೆ ರುಚಿ ನೋಡುವ ಸೀನನ ನೋವುಗಳು ಪ್ರೇಕ್ಷಕರ ಮೇಲೆ ಗಾಢ ಪರಿಣಾಮ ಬೀರುವುದಿಲ್ಲ.
ಸೀನನಾಗುವಲ್ಲಿ ವಿನಯ್ ರಾಜ್ ಕುಮಾರ್ ಪರಿಶ್ರಮ ಎದ್ದು ಕಾಣುವಂತಿದೆ. ಅದರಲ್ಲೂ ಹೊಡೆದಾಟದ ಸನ್ನಿವೇಶಗಳಲ್ಲಿ ಆ್ಯಕ್ಷನ್ ಹೀರೋ ಮಾದರಿಯಲ್ಲಿ ಮಿಂಚಿದ್ದಾರೆ. ಹೊಡೆದಾಟ, ಜಿದ್ದಿನ ದೃಶ್ಯಗಳಲ್ಲಿ ಕರಿಬೆಕ್ಕು ಎನ್ನುವ ಪಾತ್ರದ ಮೂಲಕ ಲೂಸ್ ಮಾದ ಯೋಗಿ ಸರಿಯಾದ ಎದುರಾಳಿಯಾಗಿದ್ದಾರೆ. ಸೀನನ ಪ್ರೇಯಸಿಯಾಗಿ ಮೇಘಾ ಶೆಟ್ಟಿಯ ಪಾತ್ರದ ಹೆಸರು ಕುಸುಮಾ. ನೋಟದಲ್ಲೂ ಸುಮದಂತೆ ಕಾಣುವ ಈ ಸುಂದರಿ ಬಾಯಿ ಬಿಟ್ಟರೆ ಬೆಂಕಿ. ‘ಗಾಳಿಪಟ’ ಚಿತ್ರದ ನೀತು ಶೆಟ್ಟಿಯನ್ನು ನೆನಪಿಸುತ್ತಾರೆ.
ಚಿತ್ರದ ಪ್ರಮುಖ ಖಳಪಾತ್ರ ಸದಾನಂದ ಸ್ವಾಮಿಗೆ ಗೋಪಾಲಕೃಷ್ಣ ದೇಶಪಾಂಡೆ ಜೀವ ನೀಡಿದ್ದಾರೆ. ತಣ್ಣನೆಯ ಕ್ರೌರ್ಯ ಮತ್ತು ವಂಚಕನ ಧೈರ್ಯ ಎರಡನ್ನೂ ತಮ್ಮದೇ ಶೈಲಿಯಲ್ಲಿ ವ್ಯಕ್ತಗೊಳಿಸಿದ್ದಾರೆ. ಗುಂಡರಗೋವಿ ಸತ್ಯ ಪೊಲೀಸ್ ಪಾತ್ರದಲ್ಲಿ ಅನಿರೀಕ್ಷಿತ ಎಂಟ್ರಿ ನೀಡಿ ಹೋಗುತ್ತಾರೆ.
ಪ್ರಧಾನ ಪಾತ್ರಗಳಷ್ಟೇ ಅಲ್ಲದೆ ಹಳ್ಳಿಯ ಮತ್ತೊಂದಷ್ಟು ಮಂದಿಯನ್ನು ನಿರ್ದೇಶಕರು ಪರಿಚಯಿಸುತ್ತಾರೆ. ಆದರೆ ಅವುಗಳು ಕೂಡ ಪರಿಚಯಕ್ಕಷ್ಟೇ ಸೀಮಿತವಾಗುತ್ತವೆ. ಉದಾಹರಣೆಗೆ ಬಡ್ಡಿ ಮಂಜನಾಗಿ ಒಂದೇ ದೃಶ್ಯದಲ್ಲಿ ಬಂದು ಹೋಗುವ ಬಿ.ಎಂ. ಗಿರಿರಾಜ್, ಶಾಸಕ ಅರುಣ್ ಸಾಗರ್, ಐದು ರೂಪಾಯಿ ವೈದ್ಯರಾಗಿ ಕಾಣಿಸಿಕೊಳ್ಳುವ ಅಚ್ಯುತ್ ಕುಮಾರ್, ನಾಯಕಿಯ ತಂದೆಯಾಗಿ ಬಲರಾಜ್ ವಾಡಿ, ತಾಯಿ ಸೀತಾ ಕೋಟೆಯ ಪಾತ್ರಗಳಲ್ಲಿ ನಟನೆಗೆ ದೊಡ್ಡ ಅವಕಾಶಗಳೇನೂ ಇಲ್ಲ. ಸೀನನ ತಾಯಿಯಾಗಿ ನಟಿಸಿರುವ ಅಪರ್ಣಾ ವಸ್ತಾರೆ ಹಳ್ಳಿ ಹೆಂಗಸಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಾತ್ರವಲ್ಲ ತಮ್ಮ ಕೊನೆಯ ಚಿತ್ರ ಎನ್ನುವ ಕಾರಣಕ್ಕಾಗಿ ಹೆಚ್ಚು ಗಮನ ಸೆಳೆಯುತ್ತಾರೆ.
ಹೊಡೆದಾಟದ ಸಂದರ್ಭದಲ್ಲೇ ಕಥಾನಾಯಕನ ಮೊದಲ ಪ್ರವೇಶ. ಅಲ್ಲೇ ಸಹಜ ಎನ್ನುವಂತೆ ದೊಡ್ಡದೊಂದು ಪುನೀತ್ ರಾಜ್ ಕುಮಾರ್ ಭಾವಚಿತ್ರ. ಇವೆಲ್ಲವೂ ಒಂದು ಕಮರ್ಷಿಯಲ್ ಚಿತ್ರದ ಮಾದರಿಯಲ್ಲೇ ಇದೆ. ಕಥೆ ಮುಂದೆ ಸಾಗುತ್ತಾ ಈ ಲೇಪವೇ ಹೆಚ್ಚಾಗಿ ಒಟ್ಟು ಸಂದೇಶದಲ್ಲಿ ಗ್ರಾಮೀಣ ಕ್ರಾಂತಿ ಮಾಯವಾಗುತ್ತದೆ. ಬದಲಾಗಿ ತಮಿಳು ಚಿತ್ರಗಳಂತೆ ಈ ನಾಯಕ ಕೂಡ ಆಯುಧ ಹಿಡಿದು ರಕ್ತ ಹರಿಸುತ್ತಾನೆ. ಇವೆಲ್ಲದರ ನಡುವೆ ಹಳ್ಳಿಯ ಬದುಕು ಹೇಗೆ ಹಳ್ಳ ಹಿಡಿಯುತ್ತಿದೆ ಎನ್ನುವ ಸುಳಿವನ್ನು ಚಿತ್ರ ನೀಡುತ್ತದೆ. ಅದರಲ್ಲೂ ರಾಜಕಾರಣಿಯ ಕುತಂತ್ರಕ್ಕೆ ಮನೆ ಕಳೆದುಕೊಂಡ ಹಳ್ಳಿಯ ಮುಗ್ಧ ವ್ಯಕ್ತಿಯ ಕಣ್ಣೋಟ ಚಿತ್ರ ಮುಗಿದ ಬಳಿಕವೂ ಕಾಡುತ್ತದೆ. ‘ಉಂಡೂಹೋದ ಕೊಂಡೂ ಹೋದ’ ಚಿತ್ರದಲ್ಲಿ ಕರಿಬಸವಯ್ಯ ಮೂಡಿಸುವಂಥ ಭಾವವನ್ನು ಈ ಮುಗ್ಧನ ಪಾತ್ರದ ಮೂಲಕ ಗೋಮಾರದ ಹಳ್ಳಿ ಮಂಜುನಾಥ್ ಅವರು ಮೂಡಿಸುತ್ತಾರೆ. ಈ ಸಿನೆಮಾದ ಮೂಲಕ ಹಳ್ಳಿಯ ಯುವಕರ ಉದ್ಯೋಗದ ಅಭದ್ರತೆ ಎನ್ನುವುದು ಪ್ರೇಕ್ಷಕರನ್ನು ತಲುಪಲು ಸಾಧ್ಯವಾದರೆ ಸಾರ್ಥಕ.






