ಮಫ್ತಿ ಪೊಲೀಸ್ ಅವತಾರದಲ್ಲಿ ಸುದೀಪ್; ಮಾರ್ಕ್ ಟ್ರೇಲರ್ ಬಿಡುಗಡೆ

Photo: Youtube/Saregama Kannada
ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಧ್ಯಾಹ್ನ ‘ಮಾರ್ಕ್’ ಸಿನಿಮಾದ ಟ್ರೇಲರ್ನ ಯೂಟ್ಯೂಬ್ ಲಿಂಕ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ 'ಮಾರ್ಕ್' ಆಗಿ ಸುದೀಪ್ ನಟಿಸಿದ್ದಾರೆ.
ನಟ ಸುದೀಪ್ ಶನಿವಾರ ಮಧ್ಯಾಹ್ನ ತಮ್ಮ ‘ಮಾರ್ಕ್’ ಸಿನಿಮಾದ ಟ್ರೇಲರ್ ಬಿಡುಗಡೆಯನ್ನು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಡಿಸೆಂಬರ್ 25ಕ್ಕೆ ತೆರೆಗೆ ಬರಲಿರುವ ಟ್ರೇಲರ್ನಲ್ಲಿ ಸುದೀಪ್ ಭರ್ಜರಿ ಸಾಹಸವಿರುವ ಸುಳಿವು ನೀಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಮಧ್ಯಾಹ್ನ ಟ್ರೇಲರ್ನ ಯೂಟ್ಯೂಬ್ ಲಿಂಕ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ 'ಮಾರ್ಕ್' ಆಗಿ ಸುದೀಪ್ ನಟಿಸಿದ್ದಾರೆ.
‘ಮಾರ್ಕ್’ ಸಿನಿಮಾದ ಟ್ರೇಲರ್ ಇರುವ ಯುಟ್ಯೂಬ್ ಲಿಂಕ್ ಬಿಡುಗಡೆ ಮಾಡಿದ ಸುದೀಪ್, “ಮಾರ್ಕ್ ಬಂದಿದ್ದಾನೆ” ಎಂದು ಸಂದೇಶ ಹಾಕಿದ್ದಾರೆ. ವಿಸ್ತೃತವಾದ ಸಂದೇಶದಲ್ಲಿ, “ಹೆಲೋ ನನ್ನ ಬಾದ್ಶಾಗಳೇ, ಜೋಶ್ ಹೇಗಿದೆ? ಚಿತ್ರಮಂದಿರಗಳಿಂದ ಹಿಡಿದು ಪ್ರಪಂಚದವರೆಗೆ, ಈ ಟ್ರೇಲರ್ ಅನ್ನು ಮೊದಲು ಎತ್ತಿ ಹಿಡಿದದ್ದು ನಿಮ್ಮ ಕೈಗಳು. ತುಂಬಾ ಪ್ರೀತಿ ಮತ್ತು ಶಕ್ತಿಯಿಂದ ಇದನ್ನು ಬಿಡುಗಡೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಪ್ರತಿ ಉಲ್ಲಾಸ, ಪ್ರತಿ ಸಂದೇಶ. ನಾನು ಅದನ್ನು ಅನುಭವಿಸಿದ್ದೇನೆ. ನಿಮಗೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಸುದೀಪ್ ಪೋಲೀಸ್ ಪಾತ್ರದಲ್ಲಿ ನಟಿಸಿರುವ ಸಿನಿಮಾದಲ್ಲಿ ಭರ್ಜರಿ ಸಾಹಸದ ಸುಳಿವು ದೊರೆತಿದೆ. ವಿಜಯ ಕಾರ್ತಿಕೇಯನ್ ಸಿನಿಮಾ ನಿರ್ದೇಶಿಸಿದ್ದಾರೆ. ‘ಮಾರ್ಕ್’ ಸಿನಿಮಾದ ಟ್ರೈಲರ್ನಲ್ಲಿ ಎಲ್ಲೂ ಸುದೀಪ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಮಫ್ತಿಯಲ್ಲೇ ಕಾಣಿಸಿಕೊಳ್ಳುತ್ತಾರೆ. ಮಾರ್ಕ್ ಉದ್ಯೋಗದಲ್ಲಿದ್ದರೂ ಇಲ್ಲದಿದ್ದರೂ ರೌಡಿಗಳಿಗೆ ಅಪಾಯಕಾರಿ ಎನ್ನುವಂತಹ ಸಂದೇಶಗಳಿವೆ. ‘
‘ಮ್ಯಾಕ್ಸ್’ ಸಿನಿಮಾದ ನಂತರ ಮತ್ತೆ ಕಳ್ಳ-ಪೊಲೀಸ್ ಸಿನಿಮಾದಲ್ಲಿ ಸುದೀಪ್ ಮತ್ತು ವಿಜಯ್ ಕಾರ್ತಿಕೇಯನ್ ಜೊತೆಗೂಡಿದ್ದಾರೆ. ಮಕ್ಕಳ ಕಳ್ಳ ಸಾಗಾಣಿಕೆಯ ಕತೆ ಇದೆ ಎಂದು ಟ್ರೈಲರ್ ನೋಡಿದರೆ ತಿಳಿದು ಬರುತ್ತದೆ. ಸುದೀಪ್ ಕೇಶ ಶೈಲಿ ಬದಲಿಸಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ರಾಜಕಾರಣಿಗಳ ವಿರುದ್ಧ ಪೊಲೀಸ್ ಸೆಣಸಾಟದ ಕತೆಯಿದೆ. ಟ್ರೈಲರ್ನಲ್ಲಿರುವ ಬಹುತೇಕ ಸನ್ನಿವೇಶಗಳು ರಾತ್ರಿ ಸಮಯದಲ್ಲಿಯೇ ನಿರೂಪಣೆಯಾಗಿವೆ. ಮಕ್ಕಳನ್ನು ಅಪಹರಿಸಿದ ಖಳನಾಯಕ ಪೊಲೀಸ್ 'ಮಾರ್ಕ್'ಗೆ 18 ಗಂಟೆಗಳಲ್ಲಿ ಅವರನ್ನು ಕಾಪಾಡಿಕೊಳ್ಳಲು ಅವಕಾಶ ಕೊಡುತ್ತಾನೆ. ಮುಂದೇನು ಎನ್ನುವುದು ಸಿನಿಮಾ ಕಥೆ.
ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಚೆನ್ನೈನಲ್ಲಿ ನಡೆದಿದೆ.
ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 'ಮಾರ್ಕ್' ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲಾ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದೆ.







