ದಿ ಕೇರಳ ಸ್ಟೋರಿ ಚಿತ್ರವನ್ನು ವಿ.ಎಸ್.ಅಚ್ಯುತಾನಂದನ್ ಹೇಳಿಕೆಯ ಮೇಲೆ ಮಾಡಿದ್ದೇವೆ : ಪಿಣರಾಯಿ ವಿಜಯನ್ ಟೀಕೆಗೆ ʼದಿ ಕೇರಳ ಸ್ಟೋರಿʼ ನಿರ್ದೇಶಕ ಸುದೀಪ್ತೊ ಸೇನ್ ಪ್ರತಿಕ್ರಿಯೆ
ʼಕೇರಳ ISIS ಹಾದಿಯಲ್ಲಿ ಸಾಗುತ್ತಿದೆ' ಎಂದು ಅಚ್ಯುತಾನಂದನ್ ಹೇಳಿದ್ದರು ಎಂದ ಸುದೀಪ್ತೊ ಸೇನ್

Photo | NDTV
ಹೊಸದಿಲ್ಲಿ: ʼದಿ ಕೇರಳ ಸ್ಟೋರಿʼ ಚಲನ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಟೀಕೆ ಕುರಿತು ಪ್ರತಿಕ್ರಿಯಿಸಿದ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್, ದಿ ಕೇರಳ ಸ್ಟೋರಿʼ ಚಲನಚಿತ್ರವನ್ನು ನಿರ್ಮಿಸಿರುವುದಕ್ಕೆ ವಿ.ಎಸ್. ಅಚ್ಯುತಾನಂದನ್ ಅವರ ಆತ್ಮವು ಬಹಳ ಸಂತೋಷಪಡುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಲಾಯಿತು. ʼದಿ ಕೇರಳ ಸ್ಟೋರಿʼ ಚಿತ್ರದ ನಿರ್ದೇಶನಕ್ಕಾಗಿ ಸುದೀಪ್ತೋ ಸೇನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಚಿತ್ರವು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
ಈ ಬಗ್ಗೆ ಎನ್ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ʼದಿ ಕೇರಳ ಸ್ಟೋರಿʼ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾ ಮಾಡುವುದು ಸುಮಾರು 10 ರಿಂದ 12 ವರ್ಷಗಳ ಕಠಿಣ ಪ್ರಯಾಣವಾಗಿತ್ತು. ನಾನು ಮತ್ತು ನನ್ನ ತಂಡ ಈ ವಿಷಯದ ಮೇಲೆ ವರ್ಷಗಳಿಂದ ಕೆಲಸ ಮಾಡಿದೆವು. ಅನೇಕ ಅಡಚಣೆಗಳ ಮಧ್ಯೆ ಈ ಸಿನಿಮಾ ಕೊನೆಗೂ 2023ರಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ನಂತರ, ಬಾಕ್ಸ್ ಆಫೀಸ್ ಸಂಖ್ಯೆಗಳ ಪ್ರಕಾರ, 5 ಕೋಟಿ ಜನ ಸಿನಿಮಾ ಥಿಯೇಟರ್ಗಳಲ್ಲಿ ನೋಡಿದರು. ಓಟಿಟಿಯಲ್ಲಿ ಈ ವೀಕ್ಷಕರ ಸಂಖ್ಯೆಯು 20 ಕೋಟಿಗಿಂತ ಹೆಚ್ಚಾಗಿದೆ ಎಂದು ಹೇಳಿದರು.
ಲಕ್ಷಾಂತರ ಭಾರತೀಯರು ಮತ್ತು ಪ್ರಪಂಚದಾದ್ಯಂತ ಜನರು ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತು ಅವರ ಆಶೀರ್ವಾದ ಮತ್ತು ಅವರ ಪ್ರೀತಿ ಯಾವಾಗಲೂ ನಮ್ಮೊಂದಿಗೆ ಇರುತ್ತದೆ. ನಮಗೆ ಈಗಾಗಲೇ ಜನರು ಪ್ರಶಸ್ತಿ ನೀಡಿದ್ದಾರೆ. ಆದರೆ ರಾಷ್ಟ್ರೀಯ ಪ್ರಶಸ್ತಿ, ಇದು ದೇಶದ ಅತಿದೊಡ್ಡ ಪ್ರಶಸ್ತಿ, ಅದು ಬಂದಾಗ, ನಿಜಕ್ಕೂ ಒಂದು ಅಸಾಧಾರಣ ಅನುಭವವಾಗಿದೆ ಎಂದು ಹೇಳಿದರು.
ʼದಿ ಕೇರಳ ಸ್ಟೋರಿʼ ಚಲನ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರುವ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್ತೋ ಸೇನ್, ಪಿಣರಾಯಿ ಸರ್ ಒಬ್ಬ ಅನುಭವಿ ರಾಜಕಾರಣಿ, ನಾನು ರಾಜಕಾರಣಿ ಅಲ್ಲ ಮತ್ತು ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನನಗೆ ಅರ್ಹತೆ ಇಲ್ಲ. ಆದರೆ ವಾಸ್ತವದ ವಿಷಯವೆಂದರೆ ಅವರ ಹಿರಿಯರಾಗಿರುವ ವಿ.ಎಸ್. ಅಚ್ಯುತಾನಂದನ್ ಅವರು ಇತ್ತೀಚೆಗೆ ನಿಧನರಾದರು. ʼಕೇರಳ ಐಎಸ್ಐಎಸ್ ಹಾದಿಯಲ್ಲಿ ಸಾಗುತ್ತಿದೆ' ಎಂಬ ಅವರ ಹೇಳಿಕೆ ಮತ್ತು ʼಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲಾಗುತ್ತಿದೆ ' ಎಂಬ ಅವರ ಮಾತುಗಳ ಮೇಲೆ ನಾವು ಚಲನಚಿತ್ರವನ್ನು ನಿರ್ಮಿಸಿದ್ದೇವೆ ಎಂದು ಅವರ ಆತ್ಮವು ತುಂಬಾ ಸಂತೋಷಪಡುತ್ತದೆ ಎಂದು ನಾನು ನಂಬುತ್ತೇನೆ. ವಿ.ಎಸ್.ಅಚ್ಯುತಾನಂದನ್ ಆ ಹೇಳಿಕೆಯನ್ನು ನೀಡಿದ ಸಮಯದ ದಾಖಲೆ ನಮ್ಮಲಿದೆ ಎಂದು ಹೇಳಿದರು.
ವಿ.ಎಸ್. ಅಚ್ಯುತಾನಂದನ್ ಅವರ ಹೇಳಿಕೆಗೆ ಆಗ ಹಲವು ಟೀಕೆಗಳು ಬರುತ್ತಿದ್ದಾಗ ಪಿಣರಾಯ್ ವಿಜಯನ್ ವಿ.ಎಸ್. ಅಚ್ಯುತಾನಂದನ್ ಅವರನ್ನು ಬೆಂಬಲಿಸಿದ್ದರು. ಆದ್ದರಿಂದ, ರಾಜಕಾರಣಿಗಳು ಯಾವಾಗ ಮಾತನಾಡುತ್ತಾರೋ ಗೊತ್ತಿಲ್ಲ, ಅದಕ್ಕೆ ಯಾರೂ ಪ್ರತಿಕ್ರಿಯೆಯಾಗಿ ಮಾತನಾಡಬಾರದು. ಏಕೆಂದರೆ ರಾಜಕೀಯ ಅವರ ಜೀವನ ವಿಧಾನ, ಅವರು ತಮ್ಮ ಸ್ವಂತ ಜೀವನ ಮತ್ತು ಉಳಿವಿಗಾಗಿ ಹಾಗೆ ಮಾಡುತ್ತಾರೆ. ನಾನು ರಾಜಕಾರಣಿ ಅಲ್ಲ, ನಾನು ಚಲನಚಿತ್ರ ನಿರ್ಮಾಪಕ. ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಎಂದು ನನಗೆ ತಿಳಿದಿದೆ. ನನ್ನ ತಂಡವು 10 ರಿಂದ12 ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದೆ. ನನ್ನ ಚಿತ್ರದಲ್ಲಿ ಮಾತನಾಡುವ ಪ್ರತಿಯೊಂದು ಪದಕ್ಕೂ, ಚಿತ್ರದಲ್ಲಿ ತೋರಿಸಿರುವ ಪ್ರತಿಯೊಂದು ದೃಶ್ಯಕ್ಕೂ ನಾನು ಬದ್ಧನಾಗಿರುತ್ತೇನೆ. 2 ತಿಂಗಳ ಪರಿಶೀಲನೆಯ ನಂತರ ಸೆನ್ಸಾರ್ ಮಂಡಳಿಯು ನನ್ನ ಚಿತ್ರದ ಪ್ರತಿಯೊಂದು ದೃಶ್ಯವನ್ನು ಅನುಮೋದಿಸಿತ್ತು. ಚಿತ್ರದ ಯಾವುದೇ ದೃಶ್ಯಕ್ಕೂ ಕತ್ತರಿ ಹಾಕುವಂತೆ ಸೂಚಿಸಿಲ್ಲ. ನಮ್ಮ ನಂಬಿಕೆಗೆ ನ್ಯಾಯ ದೊರೆತಿದೆ ಎಂದು ನಾನು ನಂಬುತ್ತೇನೆ ಎಂದು ಸುದೀಪ್ತೋ ಸೇನ್ ಹೇಳಿದ್ದಾರೆ.
‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗೌರವ ನೀಡುವ ಮೂಲಕ, ಕೋಮು ದ್ವೇಷವನ್ನು ಹರಡಲು ಚಲನಚಿತ್ರಗಳನ್ನು ಬಳಸಿಕೊಳ್ಳಲು ಅನುಮೋದನೆ ನೀಡಿದಂತಾಗಿದೆ ಎಂದು ಕೇರಳ ಸಿಎಂ ಪಿಣರಾಯ್ ವಿಜಯನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ನಡೆಗಳನ್ನು ಸಾಂಸ್ಕೃತಿಕ ವಲಯ ಹಾಗೂ ಚಲನಚಿತ್ರೋದ್ಯಮಗಳು ಒಗ್ಗಟ್ಟಾಗಿ ವಿರೋಧಿಸಬೇಕು ಎಂದು ಕರೆ ನೀಡಿದ್ದರು.







