ನಟ ಸೂರ್ಯ ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟುವ ವೇಳೆ ವಿದ್ಯುತ್ ಆಘಾತ; ಇಬ್ಬರು ಅಭಿಮಾನಿಗಳು ಮೃತ್ಯು

Photo credit: Twitter/@ThisIsDSP
ಚೆನ್ನೈ: ತಮಿಳಿನ ಖ್ಯಾತ ನಟ ಸೂರ್ಯ ಶಿವಕುಮಾರ್ ಅವರಿಗೆ ಭಾಷೆ, ರಾಜ್ಯಗಳ ಗಡಿಯನ್ನು ಮೀರಿ ಅಭಿಮಾನಿಗಳಿದ್ದು, ಆಂಧ್ರ, ತೆಲಂಗಾಣ, ಕರ್ನಾಟಕ, ಕೇರಳ ಸೇರಿದಂತೆ ದೇಶದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.
ಜುಲೈ 23 ರಂದು ಸೂರ್ಯ ಅವರ ಹುಟ್ಟು ಹಬ್ಬ ನಿಮಿತ್ತ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಯಾಕಲಾವರಿ ಪಾಲಯಂ ಗ್ರಾಮದಲ್ಲಿ ಅಭಿಮಾನಿಗಳು ಕಟೌಟ್ ನಿರ್ಮಿಸುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದು, ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆ.
ಕಟೌಟ್ ಕಟ್ಟುವ ವೇಳೆ ಅನಿರೀಕ್ಷಿತವಾಗಿ ಕಬ್ಬಿಣದ ಕಟೌಟ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿ ಅಭಿಮಾನಿಗಳಾದ ವೆಂಕಟೇಶ್ (19) ಮತ್ತು ಸಾಯಿ (20) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರು ಮೃತ ಅಭಿಮಾನಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತನ್ನ 48 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟ ಸೂರ್ಯ ಅವರು ಅಭಿಮಾನಿಗಳ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತ ಯುವಕರ ಕುಟುಂಬಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿದ ಸೂರ್ಯ, ಸಂತಾಪ ಸೂಚಿಸಿದ್ದಾರೆ.





