ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರವೇಶಕ್ಕೆ ಆಯ್ಕೆಯಾದ ಮರಾಠಿ ಥ್ರಿಲ್ಲರ್ ಸಿನಿಮಾ ‘ಗೊಂಡಲ್’

ಮಹಾರಾಷ್ಟ್ರದ ಸಾಂಪ್ರದಾಯಿಕ ‘ಗೊಂಡಲ್’ ಆಚರಣೆ ಮತ್ತು ಜಾನಪದ ಪ್ರದರ್ಶನ ಕಲೆಯ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾವು ಸುಮನ್ ಎಂಬ ವಿವಾಹಿತ ಮಹಿಳೆಯ ಕತೆಯನ್ನು ಹೇಳುತ್ತದೆ.
ಮರಾಠಿ ಥ್ರಿಲ್ಲರ್ ಚಲನಚಿತ್ರವಾಗಿರುವ ‘ಗೊಂಡಲ್’ 2027ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಸಿನಿಮಾವಾಗಿ ಆಯ್ಕೆಯಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಶುಕ್ರವಾರ ಘೋಷಿಸಿದೆ. ಈ ಸ್ಪರ್ಧೆಯಲ್ಲಿ ನಾಗಾ ಭಾಷೆಯ ‘ಅಂಗ್’ ಮತ್ತು ತಮಿಳು ಚಿತ್ರ ‘ಡೊರೊಥಿ’ ಸೇರಿದ್ದವು. ಸಂತೋಷ್ ದಾವಖರ್ ನಿರ್ದೇಶನದ ಈ ಸಿನಿಮಾವು 99ನೇ ಅಕಾಡೆಮಿ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ’ (Best International Feature) ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದೆ. ಈ ಸಿನಿಮಾದ ನಿರ್ದೇಶಕ ಸಂತೋಷ್ ದಾವಖರ್ ಅವರು 2025ರ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ನಿರ್ದೇಶಕ’ ವಿಭಾಗದ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ ಗೆದ್ದಿದ್ದರು.
ಆಯ್ಕೆ ಸಮಿತಿಯಲ್ಲಿ ಪಿ. ಶೇಷಾದ್ರಿ, ವಿಜಯ್ ಪಾಟ್ಕರ್, ಹುಟು ಕನೋಡಿಯಾ, ಶಾಂತಿ ಕುಮಾರ್, ಸಂದೀಪ್ ಪರಾಶರ್, ಸಂಜಯ್ ಪಾಟೀಲ್, ಸಾಬು ಜೋಸೆಫ್, ಅನಿಲ್ ಥಾಮಸ್, ವಿವೇಕ್ ವಸ್ವಾನಿ, ಬಿಜೋನ್ ದಾಸ್ಗುಪ್ತಾ, ಹಾಸನ್, ವಸನ್ ಮತ್ತು ತನಿಷ್ಠಾ ಚಟರ್ಜಿ ಅವರು ಸದಸ್ಯರಾಗಿದ್ದರು.
ಒಟ್ಟು 33 ಚಿತ್ರಗಳನ್ನು ಪರಿಶೀಲನೆಗೆ ಸಲ್ಲಿಸಲಾಗಿತ್ತು. ಅವುಗಳಲ್ಲಿ 14 ಹಿಂದಿ, ತಲಾ ನಾಲ್ಕು ಮರಾಠಿ, ತೆಲುಗು ಮತ್ತು ಗುಜರಾತಿ, ಮೂರು ತಮಿಳು ಹಾಗೂ ತಲಾ ಒಂದು ಮಲಯಾಳಂ, ಕೊನ್ಯಾಕ್ ಮತ್ತು ನೇಪಾಳಿ ಭಾಷೆಯ ಚಿತ್ರಗಳಿದ್ದವು. ಇವುಗಳಲ್ಲಿ ಒಂದು ಮೂಕಿ ಚಿತ್ರವೂ ಸೇರಿತ್ತು.
ಗೊಂಡಲ್ ಚಿತ್ರದ ಕತೆ ಗ್ರಾಮೀಣ ಮಹಾರಾಷ್ಟ್ರದಲ್ಲಿ ನೆಲೆಗೊಂಡಿದೆ. ಮಹಾರಾಷ್ಟ್ರದ ಸಾಂಪ್ರದಾಯಿಕ ‘ಗೊಂಡಲ್’ ಆಚರಣೆ ಮತ್ತು ಜಾನಪದ ಪ್ರದರ್ಶನ ಕಲೆಯ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾವು ಸುಮನ್ ಎಂಬ ವಿವಾಹಿತ ಮಹಿಳೆಯ ಕತೆಯನ್ನು ಹೇಳುತ್ತದೆ. ಸಾಂಪ್ರದಾಯಿಕ ಧಾರ್ಮಿಕ ವಿಧಿಯನ್ನು ಮನೋವೈಜ್ಞಾನಿಕ ಮತ್ತು ಸಾಂಸ್ಕೃತಿಕ ಥ್ರಿಲ್ಲರ್ ನ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. ಸಂಬಂಧಗಳು, ಬಯಕೆ ಮತ್ತು ವಂಚನೆಗಳು ಮುಖಾಮುಖಿಯಾದಾಗ ಆಕೆಯ ಜೀವನ ಅನಿರೀಕ್ಷಿತ ತಿರುವು ಪಡೆಯುತ್ತದೆ. ದೈನಂದಿನ ಸಂಬಂಧಗಳ ಕತೆಯಾಗಿ ಪ್ರಾರಂಭವಾಗಿ, ಸುಮನ್ ಕಠಿಣ ಸನ್ನಿವೇಶದಲ್ಲಿ ಸಿಲುಕಿ ಹೊರಬರಲು ಪ್ರಯತ್ನಿಸುವಾಗ ಕ್ರಮೇಣ ಥ್ರಿಲ್ಲರ್ ಆಗಿ ಬದಲಾಗುತ್ತದೆ. ಶುಭ ಸಂದರ್ಭಗಳಲ್ಲಿ ರಾತ್ರಿಯಿಡೀ ನಡೆಯುವ ಈ ಜನಪದ ಪ್ರದರ್ಶನವು ಸಂಬಂಧಗಳು, ಅಸೂಯೆ, ಬಯಕೆ ಮತ್ತು ಹಿಂಸೆಯು ಕ್ರಮೇಣವಾಗಿ ಬಹಿರಂಗಗೊಳ್ಳುವ ಹಿನ್ನೆಲೆಯಾಗುತ್ತದೆ.
ಈ ಚಿತ್ರದಲ್ಲಿ ಕಿಶೋರ್ ಕದಮ್, ಇಷಿತಾ ದೇಶಮುಖ್, ಯೋಗೇಶ್ ಸೋಹೋನಿ, ನಿಷಾದ್ ಭೋಯಿರ್, ಅನುಜ್ ಪ್ರಭು ಮತ್ತು ಇತರರು ನಟಿಸಿದ್ದು, ಹಿರಿಯ ಸಂಗೀತ ಸಂಯೋಜಕ ಇಳಯರಾಜಾ ಅವರು ಸಂಗೀತ ಸಂಯೋಜಿಸಿದ್ದಾರೆ.
‘ಗೊಂಡಲ್’ ಸಿನಿಮಾವು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಮನ್ನಣೆ ಗಳಿಸಿದೆ. ಸಿನಿಮಾ 2025ರ ನವೆಂಬರ್ 14ರಂದು ಬಿಡುಗಡೆಯಾಗಿದೆ.






