ದಾಂಪತ್ಯದ ಪಥ್ಯ ಪಾಲಿಸಲು ಇಲ್ಲಿ ಕಾನೂನು ಜ್ಞಾನ ಅಗತ್ಯ!
ಚಿತ್ರ: ಉತ್ತರ
ನಿರ್ದೇಶನ: ದಿನೇಶ್ ಬಾಬು
ನಿರ್ಮಾಣ:
ನಾಗೇಶ್ವರ ರಾವ್
ತಾರಾಗಣ:
ನಾರಾಯಣ ಸ್ವಾಮಿ, ಸಂಪ್ರತಿ ಆಳ್ವ, ತಾರಾ ಅನುರಾಧ ಮೊದಲಾದವರು.
ಆ ಲಾರಿ ಡ್ರೈವರ್ ಹೆಸರು ಭರತ್. ಆತನ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರಗಟ್ಟಲೆ ಪ್ರಯಾಣಿಸುತ್ತದೆ. ಹೀಗಾಗಿ ಭರತನಿಗೆ ತನ್ನ ಪ್ರೀತಿಯ ಪತ್ನಿ ಮತ್ತು ಮಗಳೊಂದಿಗೆ ಬೆರೆಯಲು ತಿಂಗಳಲ್ಲಿ ಐದಾರು ದಿನಗಳಷ್ಟೇ ಸಿಗುತ್ತವೆ. ಆದರೆ ಅವರ ಆ ದಾಂಪತ್ಯಕ್ಕೆ ಐದಾರು ದಿನಗಳ ಖುಷಿಯಷ್ಟೇ ಸಾಕೇ? ನಿಜಕ್ಕೂ ಆ ಜೋಡಿಯಲ್ಲಿ ದೈಹಿಕ ಸುಖದಲ್ಲಿ ಕೊರತೆ ಕಾಣಿಸುವುದು ಯಾರಿಗೆ? ಅವರು ಅದಕ್ಕೆ ಪರಿಹಾರವಾಗಿ ಆಯ್ದುಕೊಳ್ಳುವ ಮಾರ್ಗ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ನಿರ್ದೇಶಕ ದಿನೇಶ್ ಬಾಬು ಪರದೆಯ ಮೇಲೆ ಉತ್ತರ ಸಿದ್ಧಪಡಿಸಿದ್ದಾರೆ.
ಲಾರಿ ಡ್ರೈವರ್ ಭರತನ ಪತ್ನಿ ಸತಿ. ಪುರಾಣದಲ್ಲಿನ ಸತಿ ಅಂದರೆ ಪರಶಿವನ ಅರ್ಧಾಂಗಿ. ಆತನಿಗೆ ಅವಮಾನವಾಗುವುದನ್ನು ಕೂಡ ಸಹಿಸದವಳು. ಇಲ್ಲಿಯೂ ಅಷ್ಟೇ. ಭರತನನ್ನು ಪ್ರೀತಿಸಿಯೇ ಕೈ ಹಿಡಿದವಳು ಸತಿ. ಪತಿಯೇ ಪರದೈವ ಎನ್ನುವಂತೆ ಪ್ರೀತಿಸುವವಳು. ಆದರೆ ಅಂಥ ಪತಿಯಿಂದ ನಿರೀಕ್ಷಿತ ಸುಖದಲ್ಲಿ ಕೊರತೆ ಕಂಡಾಗ ಮಾತ್ರ ಪರಪುರುಷನೆಡೆಗೆ ವಶವಾಗುತ್ತಾಳೆ. ಆತ ಎಳೆ ವಯಸ್ಸಿನ ಅವಿವಾಹಿತ.
ಈ ಕಥಾತಂತುವನ್ನು ಗಮನಿಸಿದರೆ ತಕ್ಷಣ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ನೆನಪಾಗದೇ ಇರದು. ಆದರೆ ಈ ಹೋಲಿಕೆ ವಿವಾಹೇತರ ಸಂಬಂಧಕ್ಕೆ ಮಾತ್ರ ಸೀಮಿತ. ಉಳಿದಂತೆ ಅಲ್ಲಿನ ನಾಯಕಿಯ ಗಟ್ಟಿತನ ಈ ಸತಿಗೆ ಇಲ್ಲ. ಆದರೆ ಈ ಸತಿಯ ನಿಲುವನ್ನು ಗಟ್ಟಿಗೊಳಿಸುವುದು ಮಾತ್ರ ಇಂದಿನ ನಮ್ಮ ಕಾನೂನು! ಅಂದಿನಿಂದ ಇಂದಿನ ತನಕ ಕಾನೂನು ಹೆಣ್ಣಿಗೆ ಎಷ್ಟು ಪರವಾಗಿ ನಿಂತಿದೆ ಎನ್ನುವುದನ್ನು ನ್ಯಾಯಾಲಯದ ವಾದ, ಪ್ರತಿವಾದಗಳು ಸಾಬೀತು ಮಾಡುತ್ತವೆ.
ಲಾರಿ ಡ್ರೈವರ್ ಭರತ್ ಪಾತ್ರಕ್ಕೆ ಜೀವ ತುಂಬುವಂತೆ ನಟಿಸಿದ ಕೀರ್ತಿ ನಾರಾಯಣ ಸ್ವಾಮಿಗೆ ಸಲ್ಲುತ್ತದೆ. ಇದುವರೆಗೆ ಸಾಕಷ್ಟು ನೆಗೆಟಿವ್ ಶೇಡ್ ಪಾತ್ರಗಳಿಂದಲೇ ಗುರುತಿಸಿಕೊಂಡಿರುವ ನಾರಾಯಣ ಸ್ವಾಮಿ ಇಲ್ಲಿ ತಮ್ಮ ನಟನೆಯ ಮತ್ತೊಂದು ಮುಖವನ್ನು ಪ್ರದರ್ಶಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಪ್ರೇಕ್ಷಕರ ಕಣ್ಣು ತೇವಗೊಳ್ಳುವಂಥ ಆರ್ದ್ರ ಭಾವವನ್ನು ಸೃಷ್ಟಿಸಿದ್ದಾರೆ.
ಭರತ್ ಪತ್ನಿಯಾಗಿ ಸಂಪ್ರತಿ ಆಳ್ವ ನಟಿಸಿದ್ದಾರೆ. ಸತಿ ಪಾತ್ರದೊಳಗಿನ ಅತಿಯಾದ ಆಸೆಯನ್ನು ಮಿತಿಯೊಳಗಿದ್ದೇ ಪ್ರಕಟಿಸಿದ್ದಾರೆ. ಪತಿ ನೀಡುವ ಸುಖದಲ್ಲಿನ ಅತೃಪ್ತಿ, ಪರಪುರುಷನ ಸನಿಹದಲ್ಲಿನ ಆತಂಕ, ಬರುಬರುತ್ತಾ ಪತಿಯ ಮೇಲೆ ತೋರುವ ಅಸಡ್ಡೆ ಮುಂತಾದ ಎಲ್ಲ ಭಾವಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನು ಸಂಪ್ರತಿ ಮಾಡಿದ್ದಾರೆ.
ಇಬ್ಬರ ಮುದ್ದಿನ ಮಗಳು ಪಾರು ಪಾತ್ರದಲ್ಲಿನ ಬಾಲನಟಿ ಯಾಶಿಕಾರಿಂದಲೂ ಉತ್ತಮ ನಟನೆಯನ್ನು ಹೊರತೆಗೆಯಲಾಗಿದೆ. ಮೆಡಿಕಲ್ ಹುಡುಗ ರಾಜೇಶ್ ಆಗಿ ಅರ್ಜುನ್ ಚೌಹಾಣ್ ಉತ್ತಮ ಆಯ್ಕೆ ಎನಿಸುತ್ತಾರೆ.
ಸತಿಯ ಪರ ವಕೀಲೆಯಾಗಿ ಆಗಮಿಸುವ ಅಶ್ವಿನಿ ಗೌಡ ಅಪ್ಪಟ ಕಲಾವಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅತಿಥಿ ಪಾತ್ರಧಾರಿಯಾಗಿ ಆಗಮಿಸಿರುವ ತಾರಾ, ವಿಚ್ಛೇದನ ಬಯಸುವ ಗಂಡಸರಿಗೆ ಸಮಾಜದಲ್ಲಿರುವ ಸವಾಲುಗಳನ್ನು ಮನದಟ್ಟು ಮಾಡುತ್ತಾರೆ. ಸಹಜ ಸಂದೇಶಕ್ಕೆ ಅಗತ್ಯ ಅನಿಸಿದರೂ ಅಂತ್ಯದಲ್ಲಿ ಕೋರ್ಟ್ ಒಳಗಿನ ದೃಶ್ಯಗಳು ತುಸು ಹೆಚ್ಚಾಯಿತೆಂಬ ಭಾವ ಮೂಡಿಸುತ್ತದೆ. ಉಳಿದಂತೆ ಒಂದು ಮನೋಜ್ಞ ಚಿತ್ರವಾಗಿ ಕಾಡುತ್ತದೆ.






