ಶಾರುಖ್ ನಟನೆಯ ‘ಕಿಂಗ್’ ಸಿನಿಮಾದ ‘ತೂ ಮಿಲ್ ಜಾಯೇ’ ಹಾಡು ಬಿಡುಗಡೆ; ಪ್ರೀತಿಯ ಬೆನ್ನಲ್ಲೇ ದುರಂತದ ಕತೆ?

ಶಾರುಖ್ ಖಾನ್ | Photo Credit : youtube
ಈ ಹಾಡಿನ ದೃಶ್ಯಗಳು ವರ್ಷದ ಆರಂಭದಲ್ಲಿ ಬಿಡುಗಡೆಯಾದ ರಕ್ತಸಿಕ್ತ ದೃಶ್ಯಗಳನ್ನು ಒಳಗೊಂಡ ‘ಕಿಂಗ್’ ಸಿನಿಮಾದ ಟೀಸರ್ ನ ಒಂದು ಭಾಗದಂತಿವೆ.
ನವೆಂಬರ್ 2ರ ಸೋಮವಾರ ಬೆಳಗಿನ ಜಾವ ಶಾರುಖ್ ಖಾನ್ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ‘ಕಿಂಗ್’ ಸಿನಿಮಾದ ನಿರ್ಮಾಪಕರು ಚಿತ್ರದ ಮೊದಲ ಹಾಡು ‘ತೂ ಮಿಲ್ ಜಾಯೇ’ಯನ್ನು ಬಿಡುಗಡೆ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರೊಂದಿಗೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಅವರು ಶಾರುಖ್ ಅವರ ಪ್ರೇಯಸಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ನಂತರ ಹಾಡು ಪರಿಚಿತ ಶೈಲಿಗೆ ಬದಲಾಗುತ್ತದೆ. ಶಾರುಖ್ ಮತ್ತು ದೀಪಿಕಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ. ಹಿನ್ನೆಲೆಯಲ್ಲಿ ಒಂದು ರೀತಿಯ ನಿಗೂಢತೆ ಉಳಿದುಕೊಂಡಿದ್ದು, ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದಲ್ಲಿ ಈ ಜೋಡಿ ಈ ಹಿಂದೆ ಕಾಣಿಸಿಕೊಂಡಿದ್ದ 2023ರ ಬ್ಲಾಕ್ಬಸ್ಟರ್ ಸ್ಪೈ ಥ್ರಿಲ್ಲರ್ ‘ಪಠಾಣ್’ ಚಿತ್ರದ ಜನಪ್ರಿಯ ಹಾಡು ‘ಬೇಷರಮ್ ರಂಗ್’ ಅನ್ನು ಇದು ನೆನಪಿಸುತ್ತದೆ.
ಇದರ ನಡುವೆಯೇ ಶಾರುಖ್ ತಮ್ಮ ಕೆಲಸವನ್ನೂ ಮುಂದುವರಿಸುತ್ತಾರೆ. ಸರಕು ಸಾಗಣೆ ವಾಹನದಲ್ಲಿ ಮೀನುಗಳ ರಾಶಿಯ ಅಡಿಯಲ್ಲಿ ಬಂದೂಕುಗಳನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಾರೆ. ದೀಪಿಕಾ ವಾಲಿಬಾಲ್ ಆಡುವಾಗ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಾಗ, ಶಾರುಖ್ ಅದನ್ನು ಸರಿಪಡಿಸಲು ಮುಂದಾಗುತ್ತಾರೆ. ಅದೇ ಸಮಯದಲ್ಲಿ ಅವರು ಮತ್ತೊಬ್ಬ ವ್ಯಕ್ತಿಯ ಕುತ್ತಿಗೆಯನ್ನು ಮುರಿದು ಕೊಲ್ಲುವ ದೃಶ್ಯವೂ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಶಾರುಖ್ ತೀವ್ರವಾಗಿ ಹಲ್ಲೆಗೊಳಗಾಗಿ ನೋವಿನಿಂದ ಕಿರುಚುತ್ತಿರುವ ದೃಶ್ಯಗಳ ಸರಣಿಯೂ ಇದೆ. ಬಹುಶಃ ಅವರು ತಮಗೆ ವಿಶೇಷವಾದ ಏನನ್ನೋ ಅಥವಾ ಯಾರನ್ನೋ ಕಳೆದುಕೊಂಡಿರಬಹುದು. ನಂತರ ಅವರು ಕೊಡಲಿಯಿಂದ ಜನರನ್ನು ಕೊಲ್ಲುತ್ತಾ ಮುನ್ನುಗ್ಗುವ ದೃಶ್ಯಗಳು ಬರುತ್ತವೆ.
ಈ ಹಾಡಿನಲ್ಲಿ ಶಾರುಖ್ ಖಾನ್ ಅವರ ಸುಂದರವಾದ ಎಯ್ಟ್-ಪ್ಯಾಕ್ ದೇಹರಚನೆಯನ್ನೂ (eight-pack abs) ಗಮನಿಸಬಹುದು. ಹಾಡಿನ ಕೊನೆಯಲ್ಲಿ ಶಾರುಖ್ ದುರಂತದ ಬಗ್ಗೆ ಪ್ರಸ್ತಾಪಿಸುತ್ತಾರೆ. ‘ಈ ಬಾರಿ ಮನಸ್ಸಿಗೆ ಬೆಂಕಿ ಹತ್ತಿಕೊಂಡಿದೆ. ಇಡೀ ಜಗತ್ತನ್ನೇ ಸುಟ್ಟು ಹಾಕದೆ ಸುಮ್ಮನಿರುವುದಿಲ್ಲ’ ಎಂದು ಹೇಳುತ್ತಲೇ ಕ್ಯಾಸಿನೋವೊಂದರಲ್ಲಿ ವ್ಯಕ್ತಿಯೊಬ್ಬನ ತಲೆಗೆ ಗುಂಡಿಕ್ಕಿ ಕೊಲ್ಲುತ್ತಾರೆ. ಒಟ್ಟಿನಲ್ಲಿ, ಈ ಹಾಡಿನ ದೃಶ್ಯಗಳು ವರ್ಷದ ಆರಂಭದಲ್ಲಿ ಬಿಡುಗಡೆಯಾದ ರಕ್ತಸಿಕ್ತ ದೃಶ್ಯಗಳನ್ನು ಒಳಗೊಂಡ ‘ಕಿಂಗ್’ ಸಿನಿಮಾದ ಟೀಸರ್ ನ ಒಂದು ಭಾಗದಂತಿವೆ.
ಸಚಿನ್–ಜಿಗರ್ ಸಂಯೋಜಿಸಿರುವ ‘ತೂ ಮಿಲ್ ಜಾಯೇ’ ಹಾಡಿನಲ್ಲಿ ಗಾಯಕ ಅರಿಜಿತ್ ಸಿಂಗ್ ಮತ್ತು ಎಡ್ ಶೀರನ್ ಜೊತೆಯಾಗಿದ್ದಾರೆ. ಕಳೆದ ಜನವರಿಯಲ್ಲಿ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸುವ ಮೊದಲು ಅರಿಜಿತ್ ಈ ಹಾಡಿಗೆ ಧ್ವನಿ ನೀಡಲು ಒಪ್ಪಿಕೊಂಡಿದ್ದರು. ಹೀಗಾಗಿ, ಶಾರುಖ್ ಖಾನ್ ಗಾಗಿ ಅವರು ಹಾಡಿದ ಕೊನೆಯ ಹಾಡು ಇದಾಗುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಅವರು ಶಾರುಖ್ ಅಭಿನಯದ ಹಲವು ಸ್ಮರಣೀಯ ಹಾಡುಗಳನ್ನು ಹಾಡಿದ್ದಾರೆ. ಅವುಗಳಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ‘ಚೆನ್ನೈ ಎಕ್ಸ್ಪ್ರೆಸ್’ (2013) ಚಿತ್ರದ ‘ಕಾಶ್ಮೀರ್ ಮೇಂ ತು ಕನ್ಯಾಕುಮಾರಿ’, ಅದೇ ನಿರ್ದೇಶಕರ ‘ದಿಲ್ವಾಲೆ’ (2015) ಚಿತ್ರದ ‘ಗೆರುವಾ’, ಇಮ್ತಿಯಾಜ್ ಅಲಿ ನಿರ್ದೇಶನದ ‘ಜಬ್ ಹ್ಯಾರಿ ಮೆಟ್ ಸೇಜಲ್’ (2017) ಚಿತ್ರದ ‘ಹವಾಯೇಂ’ ಮತ್ತು ‘ಸಫರ್’, ರಾಹುಲ್ ಧೋಲಾಕಿಯಾ ನಿರ್ದೇಶನದ ‘ರಯೀಸ್’ (2017) ಚಿತ್ರದ ‘ಜಾಲಿಮಾ’, ಹಾಗೂ ರಾಜ್ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ (2023) ಚಿತ್ರದ ‘ಓ ಮಾಹಿ’ ಪ್ರಮುಖವಾಗಿವೆ.
‘ತೂ ಮಿಲ್ ಜಾಯೇ’ ಹಾಡಿನಲ್ಲಿ ಬ್ರಿಟಿಷ್ ಪಾಪ್ ತಾರೆ ಎಡ್ ಶೀರನ್ ಅವರೂ ಕಾಣಿಸಿಕೊಂಡಿದ್ದಾರೆ. ಹಾಡಿನ ಇಂಗ್ಲಿಷ್ ರ್ಯಾ ಪ್ ಭಾಗಗಳಿಗೆ ಅವರು ಧ್ವನಿ ನೀಡಿದ್ದಾರೆ. ಎಡ್ ಶೀರನ್ ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಹಾಡನ್ನು ಧ್ವನಿಮುದ್ರಿಸಿದ್ದರು. ಅದೇ ಸಮಯದಲ್ಲಿ ಅವರು ‘ಸಫೈರ್’ ಎಂಬ ವೈರಲ್ ಹಾಡಿನ ಚಿತ್ರೀಕರಣವನ್ನೂ ನಡೆಸಿದ್ದರು. ಆ ಹಾಡಿನಲ್ಲಿ ಅರಿಜಿತ್ ಸಿಂಗ್ ಪಂಜಾಬಿ ಭಾಷೆಯಲ್ಲಿ ಹಾಡಿದ್ದರು. ಈ ಹಾಡಿನ ವಿಡಿಯೊದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕುಮಾರ್ ಅವರು ಸಾಹಿತ್ಯ ಬರೆದಿರುವ ಹಾಗೂ ಪಿಯೂಷ್–ಶಾಜಿಯಾ ನೃತ್ಯ ಸಂಯೋಜನೆ ಮಾಡಿರುವ ‘ತೂ ಮಿಲ್ ಜಾಯೇ’ ಹಾಡಿಗೆ ಮಧುಮತಿ ಬಾಗ್ಚಿ ಅವರೂ ಧ್ವನಿ ನೀಡಿದ್ದಾರೆ.
ಸೌಜನ್ಯ: Indian Express






