ಹ್ಯಾರಿ ಪಾಟರ್ ನಲ್ಲಿ ಡಂಬಲ್ ಡೋರ್ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಮೈಕಲ್ ಗ್ಯಾಂಬನ್ ನಿಧನ

Michael Gambon: Photo:X \ @HPotterUniverse
ಹಾಲಿವುಡ್: ಹ್ಯಾರಿ ಪಾಟರ್ ಸಿನಿಮಾ ಸರಣಿಯ ಎಂಟು ಸಿನಿಮಾಗಳ ಪೈಕಿ ಆರು ಸಿನಿಮಾಗಳಲ್ಲಿ ಹೋಗ್ವರ್ಟ್ಸ್ ಮುಖ್ಯೋಪಾಧ್ಯಾಯ ಆಲ್ಬಸ್ ಡಂಬಲ್ ಡೋರ್ ಪಾತ್ರ ಸೇರಿದಂತೆ ಹಲವಾರು ವೈವಿಧ್ಯಮಯ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದ ಹಿರಿಯ ನಟ ಮೈಕಲ್ ಗ್ಯಾಂಬನ್ ಗುರುವಾರ ನಿಧನರಾಗಿದ್ದಾರೆ.
ಮೈಕಲ್ ಗ್ಯಾಂಬನ್ ನ್ಯುಮೋನಿಯಾಗೆ ಬಲಿಯಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
“ಸರ್ ಮೈಕಲ್ ಗ್ಯಾಂಬನ್ ಅವರ ನಿಧನದ ಸುದ್ದಿಯನ್ನು ತಿಳಿಸಲು ನಾವು ವಿಷಾದಿಸುತ್ತೇವೆ. ಪ್ರೀತಿಯ ಪತಿ ಹಾಗೂ ತಂದೆಯಾಗಿದ್ದ ಮೈಕಲ್ ಗ್ಯಾಂಬನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ತಮ್ಮ ಪತ್ನಿ ಆ್ಯನೆ ಹಾಗೂ ಪುತ್ರ ಫರ್ಗುಸ್ ಅವರನ್ನು ಅಗಲಿದ್ದಾರೆ” ಎಂದು ಅವರ ಕುಟುಂಬದ ಸದಸ್ಯರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಮ್ಮ ಐದು ದಶಕಗಳ ವೃತ್ತಿ ಜೀವನದಲ್ಲಿ ಎಂತಹುದೇ ಪಾತ್ರ ಬಂದರೂ ಅದಕ್ಕೆ ಜೀವ ತುಂಬುತ್ತಿದ್ದವರು ಮೈಕಲ್ ಗ್ಯಾಂಬನ್. ಅವರು ಹೆಚ್ಚಾಗಿ ಗುರುತಿಸಲ್ಪಡುತ್ತಿದ್ದದ್ದು ತಮ್ಮ ಧ್ವನಿಯ ಏರಿಳಿತದ ವೈಶಿಷ್ಟ್ಯತೆಯಿಂದ. 2002ರಲ್ಲಿ ತಮ್ಮ ಹಿಂದಿನ ಪಾತ್ರಧಾರಿಯಾದ ರಿಚರ್ಡ್ ಹ್ಯಾರಿಸ್ ನಿಧನರಾದ ನಂತರ, ಬಹು ಜನಪ್ರಿಯವಾಗಿದ್ದ ಡಂಬಲ್ ಡೋರ್ ಪಾತ್ರವನ್ನು ಮೈಕಲ್ ಗ್ಯಾಂಬನ್ ನಿರ್ವಹಿಸಿದ್ದರು.





