ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹಿರಿಯ ನಟಿ ವಹೀದಾ ರೆಹಮಾನ್ ಆಯ್ಕೆ
ವಹೀದಾ ರೆಹಮಾನ್ (Photo: X/@manoj_kotak)
ಹೊಸದಿಲ್ಲಿ: ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಈ ವರ್ಷ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ನಟಿ ವಹೀದಾ ರೆಹಮಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
“ವಹೀದಾ ರೆಹಮಾನ್ ರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಈ ವರ್ಷ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ಸಂತೋಷಪಡುತ್ತೇನೆ. ವಹೀದಾ ಅವರು ಹಿಂದಿ ಚಲನಚಿತ್ರಗಳಲ್ಲಿನ ಅವರ ಪಾತ್ರಗಳಿಗಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದ್ದಾರೆ, ಅವುಗಳಲ್ಲಿ ಪ್ಯಾಸಾ, ಕಾಗಜ್ ಕೆ ಫೂಲ್, ಚೌಧವಿ ಕಾ ಚಾಂದ್, ಸಾಹೇಬ್ ಬಿವಿ ಔರ್ ಗುಲಾಮ್, ಗೈಡ್, ಖಾಮೋಶಿ ಮೊದಲಾದವು ಪ್ರಮುಖವಾದವು” ಎಂದು ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವಹೀದಾ ಜಿ ಅವರು ತಮ್ಮ ಕಠಿಣ ಪರಿಶ್ರಮದಿಂದ ಅತ್ಯುನ್ನತ ಮಟ್ಟದ ವೃತ್ತಿಪರ ಶ್ರೇಷ್ಠತೆಯನ್ನು ಸಾಧಿಸಬಲ್ಲ ಭಾರತೀಯ ನಾರಿಯ ಸಮರ್ಪಣೆ, ಬದ್ಧತೆ ಮತ್ತು ಶಕ್ತಿಗ ಉದಾಹರಣೆಯಾಗಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.