ಖ್ಯಾತ ಮಲಯಾಳಂ ಸಂಗೀತ ನಿರ್ದೇಶಕ ಕೆ.ಜೆ. ಜಾಯ್ ನಿಧನ
ಕೆ ಜೆ ಜಾಯ್ (Photo credit: madhyamam.com)
ಚೆನ್ನೈ: ಖ್ಯಾತ ಮಲಯಾಳಂ ಸಂಗೀತ ನಿರ್ದೇಶಕ ಕೆ ಜೆ ಜಾಯ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಕೇರಳ ತ್ರಿಶ್ಶೂರಿನ ನೆಲ್ಲಿಕುನ್ನು ನಿವಾಸಿಯಾಗಿದ್ದ ಜಾಯ್ ಅವರು 200ಕ್ಕೂ ಅಧಿಕ ಹಾಡುಗಳಿಗೆ ರಾಗಸಂಯೋಜನೆ ಮಾಡಿದ್ದರು. 1975ರಲ್ಲಿ ಬಿಡುಗಡೆಗೊಂಡ ಲವ್ ಲೆಟರ್ ಸಿನಿಮಾಗೆ ಅವರು ಮೊದಲು ಸಂಗೀತ ನಿರ್ದೇಶನ ಮಾಡಿದ್ದರು.
ಪಾರ್ಶ್ವವಾಯು ಪೀಡಿತರಾಗಿ ಅವರು ದೀರ್ಘ ಕಾಲ ಹಾಸಿಗೆ ಹಿಡಿದಿದ್ದರು. ಮಲಯಾಳಂ ಸಿನಿಮಾರಂಗಕ್ಕೆ 70ರ ದಶಕಗಳಲ್ಲಿ ಕೀಬೋರ್ಡ್ಗಳು ಮತ್ತಿತರ ಸಂಗೀತ ಪರಿಕರಗಳನ್ನು ಪರಿಚಯಿಸಿದ್ದ ಅವರನ್ನು ಮಲಯಾಳಂ ಚಿತ್ರ ಸಂಗೀತದ “ಟೆಕ್ನೋ ಮ್ಯೂಸಿಶಿಯನ್” ಎಂದೂ ಕರೆಯಲಾಗುತ್ತದೆ.
ʼಇವನೆತೆ ಪ್ರಿಯಪುತ್ರನ್ʼ, ʼಚಂದನಚೋಳʼ, ʼಆರಾಧನಾʼ, ʼಮುಕ್ಕುವನೆ ಸ್ನೇಹಿಚ ಭೂತಂʼ, ʼಲಿಸಾʼ, ʼಮದಲಸʼ, ʼಸಯುಜ್ಯಂʼ, ʼಇತ್ತ ಒರು ತೀರಂʼ, ʼಅನುಪಲ್ಲವಿʼ, ʼಸರ್ಪಂʼ, ʼಶಕ್ತಿʼ, ʼಹೃದಯಂ ಪಾದುನ್ನುʼ, ʼಚಂದ್ರಹಾಸಂʼ, ʼಮನುಷ್ಯಮೃಗಂʼ, ʼಕರಿಂಬೂಚʼ ಮುಂತಾದ ಸಿನೆಮಾಗಳ ಹಾಡುಗಳಿಗೆ ಅವರು ಸಂಗೀತ ನಿರ್ದೇಶಕರಾಗಿ ಖ್ಯಾತಿಯ ಉತ್ತುಂಗಕ್ಕೇರಿದ್ದರು.
ಅವರ 77ನೇ ಹುಟ್ಟುಹಬ್ಬದ ಸಂದರ್ಭ ಪಾಟ್ಟುಪೀದಿಕಾ ಎಂಬ ಸಂಗೀತ ಆಲ್ಬಂ ಮೂಲಕ ಅವರು ರಾಗ ಸಂಯೋಜನೆ ಮಾಡಿದ್ದ ಹಾಡುಗಳನ್ನು ಹಾಡಿ ಅವರಿಗೆ ಗೌರವ ಸಲ್ಲಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಾಯ್ ಕೂಡ ಭಾಗವಹಿಸಿದ್ದರು.