ಅಕ್ಕಿ ಕುರಿತ ಹೇಳಿಕೆಯ ವಿವಾದ ; ಜಪಾನ್ ಕೃಷಿ ಸಚಿವ ರಾಜೀನಾಮೆ
“ಅಕ್ಕಿಯನ್ನು ಎಂದಿಗೂ ಖರೀದಿಸುವುದೇ ಇಲ್ಲ” ಎಂದಿದ್ದ ಸಚಿವ

ಜಪಾನ್ನ ಕೃಷಿ ಸಚಿವ ಟಾಕು ಎಟೊ | PC : aljazeera.com
ಟೋಕಿಯೊ: ಅಕ್ಕಿಯನ್ನು ಎಂದಿಗೂ ಖರೀದಿಸುವುದೇ ಇಲ್ಲ. ತನ್ನ ಬೆಂಬಲಿಗರು ಉಡುಗೊರೆಯಾಗಿ ನೀಡುತ್ತಿರುವುದರಿಂದ ಖರೀದಿಸುವ ಅಗತ್ಯ ಬಂದಿಲ್ಲ ಎಂಬ ಹೇಳಿಕೆ ವ್ಯಾಪಕ ಟೀಕೆ, ಖಂಡನೆಗೊಳಗಾದ ಬಳಿಕ ಜಪಾನ್ನ ಕೃಷಿ ಸಚಿವ ಟಾಕು ಎಟೊ ಬುಧವಾರ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
ಲಿಬರಲ್ ಡೆಮಾಕ್ರಟಿಕ್ ಪಕ್ಷಕ್ಕೆ ನಿಧಿ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಗಗನಕ್ಕೇರಿರುವ ಅಕ್ಕಿ ಬೆಲೆಯನ್ನು ನಿಯಂತ್ರಿಸಲು ಈ ವರ್ಷದ ಆರಂಭದಲ್ಲಿ ಸರಕಾರ 3 ಲಕ್ಷ ಟನ್ಗಳಷ್ಟು ಅಕ್ಕಿಯನ್ನು ತುರ್ತು ದಾಸ್ತಾನಿನಿಂದ ಬಿಡುಗಡೆಗೊಳಿಸಿರುವುದನ್ನು ಉಲ್ಲೇಖಿಸಿದ ಅವರು ಗ್ರಾಹಕರು ಪಡುತ್ತಿರುವ ಕಷ್ಟದ ಬಗ್ಗೆ ಸಹಾನುಭೂತಿ ಸೂಚಿಸಿದರು. ಮಾತು ಮುಂದುವರಿಸಿ 'ನಾನು ಯಾವತ್ತೂ ಅಕ್ಕಿಯನ್ನು ಖರೀದಿಸಿಯೇ ಇಲ್ಲ. ನನ್ನ ಬೆಂಬಲಿಗರು ತುಂಬಾ ಅಕ್ಕಿ ಕೊಡುಗೆ ನೀಡುವುದರಿಂದ ವಾಸ್ತವವಾಗಿ ನಾನು ಅದನ್ನು ಮಾರಾಟ ಮಾಡಬಹುದು' ಎಂದು ಹೇಳಿಕೆ ನೀಡಿದ್ದರು ಎಂದು ವರದಿಯಾಗಿದೆ.
ದೇಶದ ಸಾಂಪ್ರದಾಯಿಕ ಪ್ರಧಾನ ಆಹಾರದ ಬಗ್ಗೆ ಅವರ ಹೇಳಿಕೆಗೆ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಪದತ್ಯಾಗಕ್ಕೆ ಒತ್ತಡ ಹೆಚ್ಚಿತು. 'ಹೆಚ್ಚುತ್ತಿರುವ ಅಕ್ಕಿಯ ಬೆಲೆಯಿಂದ ಗ್ರಾಹಕರು ಸಂಕಷ್ಟ ಪಡುತ್ತಿರುವಾಗ ನಾನು ನೀಡಿರುವ ಅನುಚಿತ ಹೇಳಿಕೆಗಾಗಿ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಎಟೋ ಹೇಳಿದ್ದಾರೆ.







