2024ರ ಅಂತ್ಯಕ್ಕೆ ಸಹಕಾರಿ ಕಾರ್ಖಾನೆಗಳಿಗೆ 2,544.66 ಕೋಟಿ ರೂ. ನಷ್ಟ

ಬೆಂಗಳೂರು: ರಾಜ್ಯದ ಸಹಕಾರಿ ಸ್ವಾಮ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು 2024ರ ಮಾರ್ಚ್ 31ರ ಅಂತ್ಯಕ್ಕೆ ಒಟ್ಟಾರೆ 2,544.66 ಕ್ರೋಢೀಕೃತ ನಷ್ಟವನ್ನು ಅನುಭವಿಸಿದೆ. ಅಲ್ಲದೇ ಸಹಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳೂ ನಷ್ಟದಲ್ಲಿರುವುದು ರಾಜ್ಯ ಸರಕಾರದ ಗಮನಕ್ಕೂ ಬಂದಿದೆ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಕಬ್ಬು ಬೆಳೆಗಾರರಿಗೆ 38 ಕೋಟಿ ರೂ.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿರುವುದು ಮತ್ತು ಬಾಕಿ ಹಣವನ್ನು ನೀಡಬೇಕು ಎಂದು ಕಬ್ಬು ಬೆಳೆಗಾರರು ಹೋರಾಟಕ್ಕಿಳಿದಿರುವ ನಡುವೆಯೇ ಸಹಕಾರಿ ಸಕ್ಕರೆ ಕಾರ್ಖಾನೆಗಳು ಅನುಭವಿಸಿರುವ ಕ್ರೋಢೀಕೃತ ನಷ್ಟದ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.
2025ರ ಮಾರ್ಚ್ 14ರಂದು ನಡೆದಿದ್ದ ರಾಜ್ಯ ವಿಧಾನಸಭೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ಅದೇ ರೀತಿ ವಿದ್ಯುತ್ ಸರಬರಾಜು ಕಂಪೆನಿ ಮತ್ತು ಮಾರ್ಕೆಟಿಂಗ್ ಕಂಪೆನಿಗಳಿಂದ ವಿದ್ಯುತ್ ಬಿಲ್ ಹಾಗೂ ಎಥನಾಲ್ ಬಾಕಿ ಮೊತ್ತವೇ 354.31 ಕೋಟಿ ರೂ.ಯಷ್ಟಿದೆ.
ರಾಜ್ಯದಲ್ಲಿ ಒಟ್ಟಾರೆ 99 ನೋಂದಾಯಿತ ಸಕ್ಕರೆ ಕಾರ್ಖಾನೆಗಳ ಪೈಕಿ 79 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿರುತ್ತವೆ. ಸಹಕಾರಿ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟ ಮತ್ತು ಇತರ ಆಡಳಿತಾತ್ಮಕ ಕಾರಣಗಳಿಂದಾಗಿ 2,544.66 ಕ್ರೋಡೀಕೃತ ನಷ್ಟವನ್ನು ಅನುಭವಿಸಿದೆ ಎಂದು ಸಚಿವ ಶಿವಾನಂದ ಪಾಟೀಲ್ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳ ಪಟ್ಟಿ: ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು 97.03 ಕೋಟಿ ರೂ., ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ 80.99 ಕೋಟಿ ರೂ., ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ 231.995 ಕೋಟಿ ರೂ., ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ 239.38 ಕೋಟಿ ರೂ. ಕ್ರೋಡೀಕೃತ ನಷ್ಟವನ್ನು ಅನುಭವಿಸಿದೆ.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ 61.16 ಕೋಟಿ ರೂ., ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ 74.80 ಕೋಟಿ ರೂ., ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 136.48 ಕೋಟಿ ರೂ., ದಿ ಮಾರ್ಕಂಡೇಯಾ ಸಹಕಾರಿ ಸಕ್ಕರೆ ಕಾರ್ಖಾನೆ 143.67 ಕೋಟಿ ರೂ., ಮಹಾತ್ಮಾಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ 470.34 ಕೋಟಿ ರೂ., ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆ 724.80 ಕೋಟಿ ರೂ., ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 99.00 ಕೋಟಿ ರೂ., ಭೀಮಾಶಂಕರ್ ಸಹಕಾರಿ ಸಕ್ಕರೆ ಕಾರ್ಖಾನೆ 185.02 ಕೋಟಿ ರೂ.ನಷ್ಟ ಅನುಭವಿಸಿದೆ.
ಅದೇ ರೀತಿ 5 ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರಿಗೆ ಒಟ್ಟಾರೆ 38.33 ಕೋಟಿ ರೂ.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿದೆ.
ಪ್ರಕಾಶ್ ಖಂಡ್ರೆ ಅವರ ಒಡೆತನದಲ್ಲಿರುವ ಬಾಲ್ಕೇಶ್ವರ ಶುಗರ್ಸ್ ಲಿಮಿಟೆಡ್ 3.73 ಕೋಟಿ ರೂ., ಬಸವರಾಜ ಬಾಳೆಕುಂದರಗಿ ಮಾಲಕತ್ವದಲ್ಲಿರುವ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ- 5.63 ಕೋಟಿ ರೂ., ಎಸ್.ಮನೋಜ್ ಕುಮಾರ್ ಒಡೆತನದಲ್ಲಿರುವ ಬಸವೇಶ್ವರ ಶುಗರ್ಸ್ ಲಿಮಿಟೆಡ್ 6.23 ಕೋಟಿ ರೂ., ಕುಮಾರ ಚಂದ್ರಕಾಂತ್ ದೇಸಾಯಿ ಮಾಲಕತ್ವದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯು 8.49 ಕೋಟಿ ರೂ., ಆನಂದ ನ್ಯಾಮಗೌಡ ಒಡೆತನದ ಜಮಖಂಡಿ ಶುಗರ್ಸ್ ಲಿಮಿಟೆಡ್ 14.74 ಕೋಟಿ ರೂ.ಸೇರಿದಂತೆ ಒಟ್ಟಾರೆ 38.83 ಕೋಟಿ ರೂ. ಬೆಳೆಗಾರರಿಗೆ ಪಾವತಿಸಲು ಬಾಕಿ ಇರಿಸಿಕೊಂಡಿದೆ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ. ಅದೇ ರೀತಿ ವಿದ್ಯುತ್ ಸರಬರಾಜು ಮಾಡುವ ಕಂಪೆನಿಗಳು ಮತ್ತು ಮಾರ್ಕೇಟಿಂಗ್ ಕಂಪೆನಿಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಒಟ್ಟಾರೆ 603.74 ಕೋಟಿ ರೂ. ಬಾಕಿ ಬರಬೇಕಿದೆ. ವಿದ್ಯುತ್ ಸರಬರಾಜು ಮಾಡುವ ಕಂಪೆನಿಗಳಿಂದ, 249.43 ಕೋಟಿ ರೂ.ವಿದ್ಯುತ್ ಬಿಲ್ ಬಾಕಿ ಇದ್ದರೇ ಮಾರ್ಕೇಟಿಂಗ್ ಕಂಪೆನಿಗಳಿಂದ ಎಥನಾಲ್ ಬಿಲ್ ಬಾಕಿ ಮೊತ್ತ 354.31 ಕೋಟಿ ರೂ.ಬರಬೇಕಿದೆ.
2024-25ನೇ ಹಂಗಾಮಿನಲ್ಲಿ ಒಟ್ಟು 79 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ನಿರ್ವಹಿಸಿದೆ. 521.67 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದಿದೆ. ಕಾರ್ಖಾನೆಗಳು ನುರಿಸಿರುವ ಕಬ್ಬಿಗೆ 19,898.65 ಕೋಟಿ ರೂ. ಮೊತ್ತವನ್ನು ಪಾವತಿಸಬೇಕಿತ್ತು. ಈವರೆಗೆ 20,645.91 ಕೋಟಿ ರೂ. ಪಾವತಿಸಿವೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಹಾಗೆಯೇ ಕೆಲವು ಕಾರ್ಖಾನೆಗಳು ಎಫ್ಆರ್ಪಿ ದರಕ್ಕೂ ಮೇಲ್ಪಟ್ಟು ಕಬ್ಬಿನ ಬಿಲ್ಅನ್ನು ಪಾವತಿಸಿದೆ. 41.83 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿ ಶೇ. 8.02ರಷ್ಟು ಇಳುವರಿ ಪಡೆದಿದೆ.







