ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆ

ಮಂಗಳೂರು : ಗೃಹಲಕ್ಷ್ಮಿ ಯೋಜನೆಯಡಿ ಮೊತ್ತವನ್ನು ನಿಗದಿತವಾಗಿ ಜಮೆ ಮಾಡಬೇಕು. ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಲು ಬಾಕಿ ಇರುವ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮವಹಿಸುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2,668 ಫಲಾನುಭವಿಗಳ ಪೈಕಿ 1,422 ಫಲಾನುಭವಿಗಳ ಅಕೌಂಟ್ ಸೀಡಿಂಗ್ ಮಾಡಲಾಗಿದ್ದು, 1246 ಸೀಡಿಂಗ್ ಮಾಡಲು ಬಾಕಿ ಇರುತ್ತದೆ. ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 3,80,408 ಫಲಾನುಭವಿಗಳು ಯೋಜ ನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸಭೆಗೆ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮರಣ ಹೊಂದಿದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮಾಹಿತಿ ಪಡೆದು ಕೊಂಡು ಪರಿಶೀಲನೆ ನಡೆಸಬೇಕು ಎಂದರು.
ಪಡಿತರ ಚೀಟಿ ತಿದ್ದುಪಡಿಗೆ ಸಂಬಂಧಿಸಿದಂತೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್‌ಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅನುಮೋದನೆಯಾಗುವ ತನಕ ರೇಶನ್ ಕಾರ್ಡ್ ಪ್ರತಿಯನ್ನು ನೀಡದಂತೆ ಗ್ರಾಮ ಒನ್ ನವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರಿಗೆ ಅಧ್ಯಕ್ಷರು ತಿಳಿಸಿದರು.
ಕಡಬದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ರಚಿಸಲು 3 ಕಡೆಗಳಲ್ಲಿ ತಹಶೀಲ್ದಾರ್ ಮತ್ತು ವಿಭಾಗೀಯ ನಿಯಂತ್ರಣಾಧಿ ಕಾರಿಯವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಜಾಗವನ್ನು ಗುರುತಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ನಿರ್ಧರಿಸು ವಂತೆ ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ತಿಳಿಸಿದರು.
ಮಾಣಿಯಲ್ಲಿ ಫ್ಲೈ ಓವರ್‌ನ ಕೆಳಗೆ ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್ಸುಗಳು ನಿಲುಗಡೆ ಮಾಡುವುದಿಲ್ಲವೆಂದು ತಿಳಿಸಿದಾಗ, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಜಿಲ್ಲಾಧ್ಯಕ್ಷರು ಕೆಎಸ್‌ಆರ್‌ಟಿಸಿ. ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿ ನೈಜತೆ ಪರಿಶೀಲನೆ ನಡೆಸಿ, ಉದ್ಯೋಗದಲ್ಲಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಭರತ್ ಮುಂಡೋಡಿ ಸಲಹೆ ನೀಡಿದರು.
ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ. ಎಸ್, ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ನಾರಾಯಣ ನಾಯ್ಕ್, ಸದಸ್ಯರಾದ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ, ಉಮಾನಾಥ ಶೆಟ್ಟಿ, ಬಿ.ಪದ್ಮನಾಭ ಸಾಲ್ಯಾನ್ ಮತ್ತಿತರರು ಇದ್ದರು.







