ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ನಿಂದ ಮಹಿಳಾ ದಿನಾಚರಣೆ

ಮಂಗಳೂರು: ರಾಜ್ಯ ಸರಕಾರ ಮಹಿಳಾ ಸಬಲೀಕರಣದ ಉದ್ದೇಶದಿಂದ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಮತ್ತು ಜೀವನಮಟ್ಟ ಸುಧಾರಣೆಗೆ ಸಾಧ್ಯವಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರಕಾರ ಸದಾ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ನಗರ) ವತಿಯಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ಕಾರ್ಯಕ್ರದಮಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಂತಾರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವಿಸುವುದಕ್ಕಷ್ಟೇ ಸೀಮಿತವಾಗ ಬಾರದು, ಅವರು ಎದುರಿಸುತ್ತಿರುವ ಸವಾಲುಗಳ ಮೇಲೆಯೂ ಬೆಳಕು ಚೆಲ್ಲಬೇಕು. ಮಹಿಳೆಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಅವರಿಗೆ ಸಮಾನತೆ ಮತ್ತು ಘನತೆಯ ಬದುಕು ಸಿಗುವಂತಾಗಬೇಕು ಎಂದು ಐವನ್ ಡಿಸೋಜ ತಿಳಿಸಿದರು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಮಹಿಳೆಯರ ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲತೆ ಮತ್ತು ಸುರಕ್ಷತೆಯೇ ಸಮಾಜದ ಪ್ರಗತಿಯ ಅಡಿಪಾಯ. ಮಹಿಳೆ ಸಶಕ್ತಳಾದರೆ ಇಡೀ ಕುಟುಂಬ ಮತ್ತು ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಈ ಸಂದರ್ಭ ಸ್ತ್ರೀರೋಗ ತಜ್ಞೆ ಡಾ.ಕವಿತಾ ಡಿಸೋಜ ಗರ್ಭಧಾರಣೆ ಮತ್ತು ಸ್ತ್ರೀರೋಗದ ಕುರಿತು ಅರಿವು ಮೂಡಿಸಿದರು. ಬೇರೆ ಬೇರೆ ಕ್ಷೇತ್ರದ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವ, ಮಾಜಿ ಮೇಯರ್ ಗುಲ್ಝಾರ್ ಬಾನು, ಫಮಿದಾ ಬಾನು, ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಗಳಾದ ಸ್ವರೂಪಾ ಶೆಟ್ಟಿ, ಸುರೇಖಾ ಚಂದ್ರಹಾಸ್, ಗೀತಾ ಅತ್ತಾವರ, ಮಂಜುಳಾ ನಾಯಕ್, ನೀತು ಡಿಸೋಜ, ಚಂದ್ರಕಲಾ ಡಿ. ರಾವ್, ಜಿಲ್ಲಾ ಪದಾಧಿಕಾರಿಗಳಾದ ವೀಣಾ ಬೆನಾಡಿಕ್, ವಿದ್ಯಾ, ಮೀನಾ ಟೆಲ್ಲಿಸ್, ಗೀತಾ ಪ್ರವೀಣ್, ಅವಿತಾ, ಕ್ಲೀಟಾ ಡಿಸೋಜ, ಮುಡಾ ಸದಸ್ಯೆ ಸಬಿತಾ ಮಿಸ್ಕಿತ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರೂಪಾ ಚೇತನ್, ಚಂದ್ರಕಲಾ ಜೋಗಿ, ಜಯಲಕ್ಷ್ಮಿ, ವೃಂದಾ ಪೂಜಾರಿ, ಚಂದ್ರಿಕಾ ರೈ, ಶಕುಂತಲಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷೆ ಎಸ್. ಅಪ್ಪಿ ಸ್ವಾಗತಿಸಿದರು. ಚಂಚಲಾಕ್ಷಿ ವಂದಿಸಿದರು. ಶೃತಿ ಪ್ರವೀಣ್, ಶಾಂತಲಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.







