ಉಪ್ಪಿನಂಗಡಿ: ಕಾರು ಢಿಕ್ಕಿ; ಅಟೋ ಚಾಲಕ ಸಹಿತ ಐವರು ಮಕ್ಕಳಿಗೆ ಗಾಯ

ಉಪ್ಪಿನಂಗಡಿ: ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರೊಂದು ಅಟೋ ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಅಟೋ ರಿಕ್ಷಾದಲ್ಲಿದ್ದ ಒಂದೇ ಕುಟುಂಬದ ಐವರು ಮಕ್ಕಳು ಹಾಗೂ ಅಟೋ ಚಾಲಕರಾದ ಅವರ ತಂದೆ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ಮಾ.9ರಂದು ಸಂಜೆ ನಡೆದಿದೆ.
ಅಟೋ ರಿಕ್ಷಾ ಚಾಲಕ ಕಲಂದರ್ ಶಾಫಿ, ಅವರ ಮಕ್ಕಳಾದ ಮಹಮ್ಮದ್ ಜಾಝೀರ್ (13), ಮಹಮ್ಮದ್ ಇರ್ಷಾದ್ (11), ಮಹಮ್ಮದ್ ರಾಝೀಕ್ (9), ಮಹಮ್ಮದ್ ನೂರ್ (5), ಸಝ್ಮಾ (4) ಗಾಯಗೊಂಡವರು. ಇವರಲ್ಲಿ ಕಲಂದರ್ ಶಾಫಿ, ಸಝ್ಮಾ ಹಾಗೂ ಮಹಮ್ಮದ್ ಜಾಝೀರ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಅಟೋ ಚಾಲಕರಾಗಿರುವ ಕಲಂದರ್ ಶಾಫಿಯವರು ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ತನ್ನ ಮಕ್ಕಳನ್ನು ಇಂದು ಸಂಜೆ ಅಟೋ ರಿಕ್ಷಾದಲ್ಲಿ ಶಾಲೆಯಿಂದ 34 ನೆಕ್ಕಿಲಾಡಿಯ ತನ್ನ ಮನೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭ ಮಂಗಳೂರಿನಿಂದ ಉಪ್ಪಿನಂಗಡಿ ಕಡೆ ಬರುತ್ತಿದ್ದ ಕಾರೊಂದು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಪ್ರವೇಶಿಸುವಲ್ಲಿ ಎದುರಿನಿಂದ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡಿದಿದೆ. ಡಿಕ್ಕಿಯ ರಭಸಕ್ಕೆ ಅಟೋ ರಿಕ್ಷಾ ಮಗುಚಿ ಬಿದ್ದಿದ್ದು ಅದರಲ್ಲಿದ್ದ ಒಂದೇ ಮನೆಯ ಆರು ಮಂದಿಯೂ ಗಾಯಗೊಂಡಿದ್ದಾರೆ. ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







