ಉಪ್ಪಿನಂಗಡಿ| ಕಂತು ಬಾಕಿಯಿರಿಸಿದ ಕೊಠಡಿಗಳಿಗೆ ಪಂಚಾಯತ್‍ನಿಂದ ಬೀಗ

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಇರುವ ಪಂಚಾಯತ್ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳ ಏಲಂ ಬಿಡ್‍ನಲ್ಲಿ ಪಡೆದ ಅಂಗಡಿ ಕೋಣೆಗಳ ಕಂತು ಬಾಕಿ ಇರಿಸಿದ್ದ 20 ಅಂಗಡಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗ್ರಸ್ ಮಂಗಳವಾರ ಬೀಗ ಜಡಿದಿದ್ದಾರೆ.
ಏಲಂ ಪ್ರಕ್ರಿಯೆಯಲ್ಲಿ ಪಡೆದುಕೊಂಡ ಅಂಗಡಿ ಕೊಠಡಿಗಳ ಬಿಡ್ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿದ್ದು, ಇದರಂತೆ ಹಲವರು ಉಳಿಕೆ ಮೊತ್ತದ ಕಂತುಗಳನ್ನು ಪಾವತಿಸದೆ ಪಂಚಾಯತ್ ಆಡಳಿತದ ವಿನಂತಿಗಳನ್ನು ಕಡೆಗಣಿಸುತ್ತಾ ಬಂದಿದ್ದರು ಎಂದು ತಿಳಿದುಬಂದಿದೆ.
ಬಾಕಿಯಾದ ಮೊತ್ತವನ್ನು ಪಾವತಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಸ್ಪಂದಿಸದ ವ್ಯಕ್ತಿಗಳ ಅನುಭೋಗ ದಲ್ಲಿರುವ ಅಂಗಡಿ ಕೊಠಡಿಗಳಿಗೆ ಸರಕಾರಿ ರಜಾ ದಿನವಾದ ಮಂಗಳವಾರದಂದು ಮುಂಜಾನೆಯಿಂದಲೇ ಬೀಗ ಜಡಿಯುವ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ನಿಕಟಪೂರ್ವ ಪಂಚಾಯತ್ ಸದಸ್ಯರು ಅನುಭೋಗದಾರರಾಗಿರುವ ಅಂಗಡಿ ಕೊಠಡಿಗಳು ಸೇರಿದ್ದು, ಅವರ ಅಂಗಡಿಗಳಿಗೂ ಬೀಗ ಜಡಿಯುವ ಮೂಲಕ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತಿದೆ ಎಂಬ ಸಂದೇಶವನ್ನು ನೀಡಿದ್ದಾರೆ. ಮೊತ್ತ ಬಾಕಿ ಇರಿಸಲಾದ ಅಂಗಡಿಗಳಿಗೆ ಪಂಚಾಯತ್ ಆಡಳಿತದಿಂದಲೇ ಒಂದು ಬೀಗ ಜಡಿದು ಎಚ್ಚರಿಕೆ ನೋಟೀಸು ಕೊಠಡಿಯ ಬಾಗಿಲಿಗೆ ಅಂಟಿಸಲಾಗಿತ್ತು.






