ನೂತನ ಮುಖ್ಯಮಂತ್ರಿಯಿಂದ ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸಿರುವುದು ಶ್ಲಾಘನೀಯ: ಕರ್ನಾಟಕ ಮುಸ್ಲಿಂ ಜಮಾಅತ್

ಮಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಅನಿವಾಸಿ ಕನ್ನಡಿಗರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವುದು ಶ್ಲಾಘನೀಯ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಹೇಳಿಕೆಯಲ್ಲಿ ತಿಳಿಸಿದೆ.
ಸಾರ್ವಜನಿಕರ ಕುಂದುಕೊರತೆಗೆ ಸ್ಪಂದಿಸಲು ಹಾಗೂ ಅನಿವಾಸಿಗರಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಕೇರಳ ಸರಕಾರದ ’ನೋರ್ಕಾ’ ಇಲಾಖೆಯಂತೆ ಇದು ಕೂಡ ಯಶಸ್ವಿಯಾಗಿ ಕೂಡ ಕಾರ್ಯನಿರ್ವಹಿಸಲಿ ಎಂದು ಆಶಿಸಿರುವ ಕರ್ನಾಟಕ ಮುಸ್ಲಿಂ ಜಮಾಅತ್, ಜಗತ್ತಿನಾದ್ಯಂತ ವಾಸಿಸುತ್ತಿರುವ ಅಂದಾಜು 18 ಲಕ್ಷ ಅನಿವಾಸಿ ಕನ್ನಡಿಗರ ಪಾಲಿಗೆ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ರಾಜ್ಯ ಸರಕಾರದ ಈ ತೀರ್ಮಾನದಿಂದ ತಾಯ್ನಾಡಿನಲ್ಲಿ ಹೂಡಿಕೆ ಮಾಡಲು, ಉದ್ಯಮದ ಬೆಳವಣಿಗೆಗೆ ಉತ್ತೇಜನ ನೀಡಲು ಸುಲಭ ಸೌಲಭ್ಯ ಒದಗಿಸಲಿದೆ ಎಂದು ಅಭಿಪ್ರಾಯಪಟ್ಟಿದೆ.
ವಿದೇಶದಲ್ಲಿರುವ ವಲಸಿಗರು ಎದುರಿಸುವ ಆಡಳಿತಾತ್ಮಕ, ಕಾನೂನು ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿ ಸಲು ತ್ವರಿತ ಮತ್ತು ಅಧಿಕೃತ ವ್ಯವಸ್ಥೆಯನ್ನು ಕೂಡ ಇದು ಒದಗಿಸಲಿದೆಯೆಂದೂ ತುರ್ತು ನೆರವು ಮತ್ತು ಸ್ವದೇಶಕ್ಕೆ ವಾಪಸಾತಿ, ಬಿಕ್ಕಟ್ಟುಗಳು, ಉದ್ಯೋಗ ವಂಚನೆಗಳು ಅಥವಾ ವಿದೇಶದಲ್ಲಿ ಸಂಭವಿಸುವ ದುರದೃಷ್ಟಕರ ಸಾವುಗಳ ಸಂದರ್ಭದಲ್ಲಿ ಅಗತ್ಯವಿರುವ ನಿರ್ವಹಣಾ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವುದು ಈ ಸಚಿವಾಲಯದ ಮೂಲಕ ಸಾಧ್ಯ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಹೇಳಿದೆ.




