ರಾಜಕೀಯಲ್ಲಿ ಅಹಿಂಸೆಯನ್ನು ಪ್ರಥಮ ಬಾರಿಗೆ ಜಗತ್ತಿಗೆ ಪರಿಚಯಿಸಿದವರು ಗಾಂಧಿ : ಡಾ.ನಾಗಪ್ಪ ಗೌಡ

ಮಂಗಳೂರು,ಅ.2: ರಾಜಕೀಯದಲ್ಲಿ ಅಹಿಂಸೆಯನ್ನು ಪ್ರಥಮ ಬಾರಿಗೆ ಜಗತ್ತಿಗೆ ಪರಿಚಯಿಸಿದವರು ಮಹಾತ್ಮ ಗಾಂಧಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ನಾಗಪ್ಪ ಗೌಡ ಆರ್ ತಿಳಿಸಿದ್ದಾರೆ.
ಅವರು ಗುರುವಾರ ನಗರದ ಟಾಗೋರ್ ಪಾರ್ಕ್ ನಲ್ಲಿ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ ಗಾಂಧಿ ಜಯಂತಿ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಧಿಕಾರದ ಲಾಲಸೆಯಿಂದ ದೂರ ಉಳಿದ ಗಾಂಧಿ ತನ್ನ ಬದುಕಿನಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ತನ್ನನ್ನೆ ಪ್ರಯೋಗಕ್ಕೆ ಒಡ್ಡಿಕೊಂಡು ಇತರರಿಗೂ ಉತ್ತಮ ಸಂದೇಶ ರವಾನಿಸಿದರು. ತತ್ವ ರಹಿತ ರಾಜಕಾರಣ, ದುಡಿಮೆ ಇಲ್ಲದ ಸಂಪತ್ತು,ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ತ್ಯಾಗ ವಿಲ್ಲದ ಪೂಜೆ ಸಮಂಜಸವಲ್ಲವೆಂದು ಸಾರಿದರು. ಗಾಂಧಿಯವರ ಅಹಿಂಸೆ,ಸರಳತೆ,ಧಾರ್ಮಿಕ ಸಹಿಷ್ಣುತೆ,ಸ್ವಾಲಂಬನೆಯ ಬದುಕಿನ ಆದರ್ಶಗಳು ಸಾರ್ವಕಾಲಿಕ ಮನ್ನಣೆಗೆ ಪಾತ್ರವಾಗಬೇಕಾದ ಮೌಲ್ಯಗಳಾಗಿವೆ ಎಂದರು.
ಈ ವೇಳೆ ಗಾಂಧಿವಾದಿ ಕೆ.ಟಿ.ಆಳ್ವರಿಗೆ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ವರ್ಷದ ವ್ಯಕ್ತಿ ಗೌರವ 2024ನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷ ಪ್ರಭಾಕರ ಶ್ರೀ ಯಾನ್, ಕಾರ್ಯದರ್ಶಿ ಡಾ.ಇಸ್ಮಾಯಿಲ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಪೇಮ ಚಂದ್ ವಂದಿಸಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.





