ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ: ಸಚಿವ ಕೆ.ಜೆ. ಜಾರ್ಜ್

ಮಂಗಳೂರು: ಬದುಕಿನಲ್ಲಿ ಏನಾದರೊಂದು ಸಾಧನೆ ಮಾಡಲು ಅನೇಕರು ಪ್ರಯತ್ನಿಸುತ್ತಾರೆ. ಆದರೆ ಎಲ್ಲರಿಗೂ ಕೈಗೂಡುವುದಿಲ್ಲ. ಯಾರ ಪ್ರೋತ್ಸಾಹವೂ ಇಲ್ಲದೆ ಸ್ವತಃ ಶಕ್ತಿಮೀರಿ ಪ್ರಯತ್ನಿಸಿ ಸಾಧಿಸುವವರೂ ಇದ್ದಾರೆ. ಅಂತಹವರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ರಚನಾ) ವತಿಯಿಂದ ನಗರದ ಮಿಲಾಗ್ರಿಸ್ ಸಭಾ ಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಕೆಥೋಲಿಕ್ ಉದ್ಯಮಿ, ವೃತ್ತಿಪರ ಹಾಗೂ ಕೃಷಿ ಕ್ಷೇತ್ರದ ಸಾಧಕ ರಿಗೆ ನೀಡುವ ರಚನಾ ಪ್ರಶಸ್ತಿಯನ್ನು ಐವರು ಸಾಧಕರಿಗೆ ಪ್ರದಾನಿಸಿ ಅವರು ಮಾತನಾಡಿದರು.
ರಚನಾ ಸಂಸ್ಥೆಯು ಅರ್ಹ ಸಾಧಕರನ್ನೇ ಆಯ್ದುಕೊಂಡು ಗೌರವಿಸಿದೆ. ನಾನಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಪ್ರಶಸ್ತಿಗೆ ಮೆರಗು ತರುವಂತೆ ಮಾಡಿದೆ. ಪ್ರಶಸ್ತಿ ಪುರಸ್ಕೃತರ ಜವಾಬ್ದಾರಿಯನ್ನೂ ಹೆಚ್ಚು ವಂತೆ ಮಾಡಿದೆ. ದೇಶಕ್ಕೆ ಕೊಂಕಣಿ ಕೆಥೋಲಿಕರ ಕೊಡುಗೆ ಅಪಾರ. ರಾಜಕೀಯದಲ್ಲೂ ಕೊಂಕಣಿ ಕೆಥೋಲಿಕರು ಸಾಕಷ್ಟು ಸೇವೆ ನೀಡಿದ್ದಾರೆ. ಕ್ರೈಸ್ತರ ಉತ್ತಮ ಸೇವೆಯಿಂದಾಗಿ ಸಮುದಾಯವನ್ನು ಗುರುತಿಸುವ ಕೆಲಸವಾಗುತ್ತಿದೆ ಎಂದು ಕೆ.ಕೆ.ಜಾರ್ಜ್ ನುಡಿದರು.
ಮಾಜಿ ಶಾಸಕ ಜೆ.ಆರ್.ಲೋಬೋ(ವೃತ್ತಿಪರ), ಬೆಂಗಳೂರಿನ ಆಸ್ಟಿನ್ ರೋಚ್(ಉದ್ಯಮಿ), ಮಂಗಳೂರಿನ ಡಾ.ಗಾಡ್ವಿನ್ ರೊಡ್ರಿಗಸ್ ಬೆಳ್ವಾಯಿ (ಕೃಷಿಕ), ದುಬೈಯ ಪ್ರತಾಪ್ ಮೆಂಡೋನ್ಸಾ (ಅನಿವಾಸಿ ಉದ್ಯಮಿ), ಶೋಭಾ ಮೆಂಡೊನ್ಸಾ (ಮಹಿಳಾ ಸಾಧಕಿ) ಅವರಿಗೆ 2025ನೇ ಸಾಲಿನ ರಚನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ರಚನಾ)ಯ ಅಧ್ಯಕ್ಷ ಜಾನ್ ಬಿ. ಮೊಂತೇರೊ ಸ್ವಾಗತಿಸಿದರು. ಶಾಸಕ ಐವನ್ ಡಿಸೋಜ, ಉದ್ಯಮಿ ಜಾನ್ ಸುನಿಲ್, ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ, ಡೀನ್ ಮತ್ತು ನಿರ್ದೇಶಕಿ ಡಾ.ಸಿಂಥಿಯಾ ಮಿನೇಜಸ್, ರಚನಾ ಸಂಸ್ಥೆಯ ಕಾರ್ಯದರ್ಶಿ ವಿಜಯ್ ವಿ. ಲೋಬೋ, ಕೋಶಾಧಿಕಾರಿ ನೆಲ್ಸನ್ ಮೊಂತೇರೊ, ಉಪಾಧ್ಯಕ್ಷ ನವೀನ್ ಲೋಬೋ, ಸಂಘಟಕ ಯುಲಾಲಿಯಾ ಡಿಸೋಜ ಉಪಸ್ಥಿತರಿದ್ದರು.
ಪರ್ ಕ್ಯಾಪಿಟಲ್‌ನಲ್ಲಿ ಕರ್ನಾಟಕ ನಂ.1: ಗ್ಯಾರಂಟಿ ಯೋಜನೆಗೆ ರಾಜ್ಯ ಸರಕಾರ 56 ಕೋ. ರೂ. ಖರ್ಚು ಮಾಡುತ್ತಿದೆ. ಮಹಿಳಾ ಸಬಲೀಕರಣಕ್ಕೂ ಆದ್ಯತೆ ನೀಡುತ್ತಿದೆ. ಗ್ಯಾರಂಟಿ ಮೂಲಕ ಜನರಿಗೆ ನೀಡಿದ ಹಣವನ್ನು ವ್ಯಯಿಸುವ ಮೂಲಕ ತಲಾ ಆದಾಯ ಹೆಚ್ಚಾಗುತ್ತಿದೆ. ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.







