ಭಾರತೀಯ ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶ- ತಯಾರಿ; ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಪ್ರೇರಣಾದಾಯಕ ಕಾರ್ಯಕ್ರಮ

ಮಂಗಳೂರು, ಅ.8 : ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ (ಬಿಎಎಲ್) ವತಿಯಿಂದ ಅ.12ರಂದು ( ರವಿವಾರ) ಬೆಳಗ್ಗೆ 10ಕ್ಕೆ ಇನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ‘ಭಾರತೀಯ ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳು ಮತ್ತು ತಯಾರಿ’ ಎಂಬ ಪ್ರೇರಣಾದಾಯಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾರತೀಯ ರಕ್ಷಣಾ ಸೇವೆಯಲ್ಲಿ ವೃತ್ತಿ ನಿರ್ವಹಿಸಲು ಆಸಕ್ತಿ ಹೊಂದಿರುವ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಕಾರ್ಯಕ್ರಮ ಆಯೋಜಿಸಲಾಗಿದೆ. ಪುಣೆಯ ಅನೀಸ್ ಡಿಫೆನ್ಸ್ ಕೆರಿಯರ್ ಇನ್ಸ್ಟಿಟ್ಯೂಟ್ ಸ್ಥಾಪಕ ಮತ್ತು ನಿರ್ದೇಶಕ ಅನೀಸ್ ಕುಟ್ಟಿ ಕಾರ್ಯಕ್ರಮ ನಡೆಸಿಕೊಡುವರು ಎಂದು ಬಿಐಟಿ ಪ್ರಾಂಶುಪಾಲ ಡಾ.ಮಂಜೂರ್ ಬಾಷಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎನ್‌ಡಿಎ, ಸಿಡಿಎಸ್, ಎಎಫ್‌ಸಿಎಟಿ ಮುಂತಾದ ಪ್ರಮುಖ ರಕ್ಷಣಾ ಪ್ರವೇಶ ಪರೀಕ್ಷೆಗಳ ಕುರಿತು ಅರ್ಹತಾ ಮಾನದಂಡಗಳು, ತಯಾರಿ ವಿಧಾನಗಳು, ಮಾನಸಿಕ ದೃಢತೆಯ ಕುರಿತು ಅನೀಸ್ ಕುಟ್ಟಿ ಸಲಹೆ ನೀಡಲಿದ್ದಾರೆ. ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನ ಅರೆನಾದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ವಿಭಾಗಗಳ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ ಎಂದವರು ಹೇಳಿದರು.
ಈ ಉಪಕ್ರಮವು ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್‌ನ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು ಮತ್ತು ರಾಷ್ಟ್ರ ಸೇವೆಯ ಮನೋಭಾವ ಬೆಳೆಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. "Serve the Nation - Join Defence Forces - Make a Successful Career" ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಮಾಹಿತಿಗಾಗಿ ಕಾರ್ಯಕ್ರಮ ಸಂಯೋಜಕರಾದ ಬಿಐಟಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಾಧ್ಯಕ್ಷ ಪ್ರೊ.ಮುಹಮ್ಮದ್ ಸಿನಾನ್ (98867 37890) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪದವಿ ಪ್ರದಾನ :
ಅ.11ರಂದು ಬೆಳಗ್ಗೆ 10ಕ್ಕೆ ಬಿಐಟಿ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಕಿಯೋನಿಕ್ಸ್ ಅಧ್ಯಕ್ಷ, ಶಾಸನ ಶರತ್ ಬಚ್ಚೇಗೌಡ, ಎನ್‌ಐಟಿಕೆ ಸುರತ್ಕಲ್‌ನ ಪ್ರೊ. ಉದಯಕುಮಾರ್ ಆರ್. ಯರಗಟ್ಟಿ, ಐಎನ್‌ಎಚ್‌ಎಎಫ್ ಅಧ್ಯಕ್ಷ ಕೀರ್ತಿ ಶಾ, ರೋಬೋಸಾಫ್ಟ್ ಸ್ಥಾಪಕ ರೋಹಿತ್ ಭಟ್ ಅತಿಥಿಯಾಗಿ ಭಾಗವಹಿಸುವರು. ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ನ ಚೇರ್ಮನ್ ಸಯ್ಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸುವರು ಎಂದರು.
ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ.ಪೃಥ್ವಿರಾಜ್, ಬಿಐಟಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಾಧ್ಯಕ್ಷ ಪ್ರೊ.ಮುಹಮ್ಮದ್ ಸಿನಾನ್, ಪ್ರೊ. ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.







