ಮಂಗಳೂರು: ರೈಲ್ವೆಯಲ್ಲಿ ‘ಉರಿಯೂತ’ ಪದಾರ್ಥಗಳ ಸಾಗಾಟ ನಿಷೇಧ..!

ಮಂಗಳೂರು, ಅ.8: ನಗರದ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ‘ಉರಿಯೂತ’ ಪದಾರ್ಥಗಳ ಸಾಗಾಟ ನಿಷೇಧಿಸಲಾಗಿದೆ ಎಂಬ ಫಲಕಗಳನ್ನು ಅಳವಡಿಸಲಾಗಿದೆ.
ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ 1ರಲ್ಲಿ ಇಂತಹ ಫಲಕಗಳನ್ನು ಅಳವಡಿಸಲಾಗಿದೆ.
ಗಾಯ ಅಥವಾ ದೇಹಕ್ಕೆ ಸೇರದ ಯಾವುದಾದರೂ ಸೂಕ್ಷ್ಮ ಜೀವಿಗಳು ಅಥವಾ ವಿಷಕಾರಿ ರಾಸಾಯನಿಕಗಳಿಂದ ಉರಿಯೂತ ಉಂಟಾಗುತ್ತದೆ. ಆದರೆ ರೈಲ್ವೇ ಇಲಾಖೆಯು ನಿಷೇಧಿಸಿರುವ ಉರಿಯೂತ ಪದಾರ್ಥ ಬೇರೆ ಆಗಿದೆ. ಇಂಗ್ಲಿಷ್‌ನಲ್ಲಿ ʼInflammatory Article Prohibited’ ಎನ್ನುವ ಅರ್ಥವನ್ನು ಕನ್ನಡದಲ್ಲಿ ಉರಿಯೂತ ಪದಾರ್ಥಗಳ ನಿಷೇಧಿಸಲಾಗಿದೆ ಎಂದು ಬರೆದಿದೆ.
Inflammatory ಎಂಬ ಶಬ್ದಕ್ಕೆ ಗೂಗಲ್‌ನಲ್ಲಿ ಉರಿಯೂತಕಾರಿ, ಕೆರಳಿಸುವ, ಪ್ರಚೋದಕ ಎಂಬ ಅರ್ಥ ಇದೆ. ಇದರಲ್ಲಿ ‘ಉರಿಯೂತಕಾರಿ’ ಎನ್ನುವ ಅರ್ಥವನ್ನು ಇಲಾಖೆ ಬಳಸಿಕೊಂಡಂತಿದೆ. ನಿಜವಾಗಿಯೂ ಅಗ್ನಿ ಮತ್ತು ಸ್ಫೋಟದ ಗಂಭೀರ ಅಪಾಯವಿರುವ, ಬೇಗನೆ ಬೆಂಕಿ ಹತ್ತುವ ಅಥವಾ ಉರಿಹತ್ತುವ ಪೆಟ್ರೋಲ್, ಗ್ಯಾಸ್ ಮತ್ತಿತರ ತೀವ್ರ ದಹನಕಾರಿ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿ ಹಾಕಿರುವ ಫಲಕ ಆಗಿದೆ. ಅದನ್ನು ಉರಿಯೂತದ ಪದಾರ್ಥಗಳನ್ನು ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ.
‘‘ ಭಾರತೀಯ ರೈಲ್ವೇಯಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಸ್ಥಳೀಯರಿಗೆ ಆದ್ಯತೆ ನೀಡುವುದು ಕೇಂದ್ರ ಸರಕಾರದ ಪ್ರಮುಖ ಕರ್ತವ್ಯವಾಗಿದೆ. ಆದರೆ ಕನ್ನಡ ತಿಳಿಯದ ವ್ಯಕ್ತಿಗಳಿಗೆ ಕೆಲಸ ನೀಡಿದರೆ ಇಂತಹ ಸಮಸ್ಯೆ ಸಹಜ. ಸ್ಥಳೀಯ ಜನರು ಅವರೊಂದಿಗೆ ವ್ಯವಹರಿಸುವಲ್ಲಿ ತೊಂದರೆ ಅನುಭವಿಸುತ್ತಾರೆ. ಜೊತೆಗೆ, ಭಾಷಾಂತರದ ಸಂದರ್ಭಗಳಲ್ಲಿ ತಪ್ಪುಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. ರೈಲು ಯಾತ್ರಿ ಸಂಘ ಮುಂಬೈ ಇದರ ಕಾರ್ಯಕಾರಿ ಕಾರ್ಯದರ್ಶಿ ಅಮೃತ್ ಪ್ರಭು ಗಂಜೀಮಠ ಅಭಿಪ್ರಾಯಪಟ್ಟಿದ್ದಾರೆ.







