ದಸರಾ ಉತ್ಸವ ಸಂದರ್ಭ ಅತ್ಯಾಚಾರಗೈದು ಕೊಲೆಗೈಯಲ್ಪಟ್ಟ ಬಾಲಕಿಗೆ ನ್ಯಾಯ ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು: ವಿಮೆನ್ ಇಂಡಿಯಾ ಮೂವ್ಮೆಂಟ್

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ದಸರಾ ಉತ್ಸವ ಸಂದರ್ಭದಲ್ಲಿ ಜೀವನೋಪಾಯಕ್ಕಾಗಿ ಬಲೂನು ಮಾರಾಟ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿ ರಾಧಿಕಾ ಳನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣ, ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ನಿರಂತರವಾಗುತ್ತಿರುವ ಇಂತಹ ಹೇಯ ಕೃತ್ಯ ಗಳನ್ನು ಮಟ್ಟ ಹಾಕುವಲ್ಲಿ ನಮ್ಮ ವ್ಯವಸ್ಥೆಯು ವಿಫಲವಾಗಿರುವುದು ಖೇದಕರ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮೈಸೂರು ಜಿಲ್ಲಾಧ್ಯಕ್ಷೆ ಝರೀನ್ ತಿಳಿಸಿದ್ದಾರೆ.
ಪ್ರಕರಣದ ಆರೋಪಿಯನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಲಾಗಿದ್ದರೂ , ಆರೋಪಿಯನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸುವವರೆಗೆ ಬಾಲಕಿಗೆ ನ್ಯಾಯ ದೊರೆಯಲು ಸಾಧ್ಯವಿಲ್ಲ.
ಆದುದರಿಂದ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಕೊಂಡು ಬಡ, ಮುಗ್ಧ ಹೆಣ್ಣು ಮಗುವಿಗೆ ನ್ಯಾಯ ಒದಗಿಸಬೇಕು. ಅಲ್ಲದೆ ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ವಲಸೆ ಹೋಗುವ ನಿರಾಶ್ರಿತರಿಗೆ , ವಿಶೇಷವಾಗಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸೂಕ್ತವಾದ ವಸತಿ ಸೌಕರ್ಯಗಳನ್ನು ಒದಗಿಸಬೇಕು. ಮೃತ ಬಾಲಕಿಯ ಕುಟುಂಬಕ್ಕೆ ಶೀಘ್ರಶವಾಗಿ ಸೂಕ್ತ ಪರಿಹಾರ ನೀಡಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮೈಸೂರು ಜಿಲ್ಲಾಧ್ಯಕ್ಷೆ ಝರೀನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.





