ದೀಪ ಪರಿಸರದ ಮಾಲಿನ್ಯ ದೂರ ಮಾಡುತ್ತದೆ: ಅನಂತಪದ್ಮನಾಭ ಅಸ್ರಣ್ಣ

ಮಂಗಳೂರು, ಅ.20: ಬದುಕಿನಲ್ಲಿ ದೀಪದ ಪ್ರಾಮುಖ್ಯತೆ ಮಹತ್ತರವಾದದ್ದು, ದೀಪ ಹಚ್ಚಿದರೆ ಎಲ್ಲರಿಗೂ ಒಳಿತಾಗು ತ್ತದೆ. ದೀಪ ಚೆನ್ನಾಗಿ ಉರಿದಾಗ ಪರಿಸರದ ಮಾಲಿನ್ಯ ದೂರವಾಗುತ್ತದೆ, ಎಂದು ಕಟೀಲ್ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಅಸ್ರಣ್ಣ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರ ನೇತೃತ್ವದಲ್ಲಿ ನಗರದ ಪುರಭವನದಲ್ಲಿ ಸೋಮವಾರ ನಡೆದ 11ನೇ ವರ್ಷದ ಭಾವೈಕ್ಯದ ದೀಪಾವಳಿ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಕಿನ ಹಬ್ಬ ದೀಪಾವಳಿಯ ಮಹತ್ವ ಮಹತ್ತರವಾದುದು. ದೀಪ ನಮ್ಮಲ್ಲಿರುವ ಕತ್ತಲೆಯನ್ನು ನಿವಾರಿಸುತ್ತದೆ. ಆರೋಗ್ಯಕರವಾದ ವಾತಾವರಣವನ್ನು ಮೂಡಿಸುತ್ತದೆ. ದೀಪ ನಮ್ಮಲ್ಲಿರುವ ಕೆಟ್ಟಗುಣಗಳನ್ನು ಸುಟ್ಟು ಮನಸ್ಸನ್ನು ಪರಿಶುದ್ಧ ಮಾಡುತ್ತದೆ ಎಂದರು.
ಪಂಚಭೂತದಿಂದಾಗಿ ಪ್ರಪಂಚ ನಡೆಯುತ್ತದೆ. ದೀಪ ಉರಿಯಬೇಕಾದರೆ ಆಕಾಶ ಮತ್ತು ವಾಯುಬೇಕು. ಪಂಚಭೂತದಿಂದ ಪ್ರಪಂಚ ನಡೆಯುತ್ತದೆ. ದೀಪ ಉರಿಯಬೇಕಾದರೆ ಆಕಾಶ ಮತ್ತು ಅಗ್ನಿಬೇಕು ಎಂದು ನುಡಿದರು.
ಸಿಎಸ್ಐ ಕರ್ನಾಟಕ ದಕ್ಷಿಣ ಡಯಾಸಿಸ್ನ ಬಿಷಪ್ ರೆ.ಫಾ ಹೇಮಚಂದ್ರ ಕುಮಾರ್ ಮಾತನಾಡಿ ಬೆಳಕಿಗೆ ಯಾವುದೇ ಭೇದವಿಲ್ಲ.ಬೆಳಕು ಸತ್ಯವನ್ನು ಬಹಿರಂಗಪಡಿಸುತ್ತದೆ. ಕತ್ತಲೆಯಿಂದ ಬೆಳಕಿಗೆ ಬರಲು ಸಹಾಯ ಮಾಡುತ್ತದೆ ಎಂದರು
ಮಂಗಳೂರು ವಿವಿ ಉಪಕುಲಪತಿ ಡಾ. ಪಿಎಲ್ ಧರ್ಮ ಅವರು ದೀಪಾವಳಿ ಅಂಗವಾಗಿ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದರು.
ಉದ್ಯಮಿ ಎ.ಜೆ.ಶೆಟ್ಟಿ, ದ.ಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅಪ್ಪಿ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಐಎಂಎ ಅಧ್ಯಕ್ಷ ಡಾ.ಸದಾನಂದ ಪೂಜಾರಿ, ದ.ಕ. ಜಿಲ್ಲಾ ಪ್ರಧಾನ ಸರಕಾರಿ ಅಭಿಯೋಜಕ ಎಂ.ಪಿ.ನೊರೊನ್ಹಾ,ಮಾಜಿ ಮೇಯರ್ ಶಶೀಧರ ಹೆಗ್ಡೆ, ಕವಿತಾ ಐವನ್ ಡಿ ಸೋಜ,ಸಂಘಟಕರಾದ ಜೆ.ನಾಗೇಂದ್ರ ಕುಮಾರ್, ಟಿ.ಡಿ.ವಿಕಾಶ್ ಶೆಟ್ಟಿ, ಕೆ.ಭಾಸ್ಕರ ರಾವ್, ಸತೀಶ್ ಪೆಂಗಲ್, ಇಮ್ರಾನ್ ಕುದ್ರೋಳಿ, ಪ್ರಗತಿ ಬೇಕಲ್ ಮತ್ತಿತರರು ಉಪಸ್ಥಿತರಿದ್ದರು.
ದೀಪಾವಳಿ ಅಂಗವಾಗಿ ಗೂಡುದೀಪ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.







