ಕೃಷಿ ಭೂಮಿ ನಾಶ : ತೆಂಕಮಿಜಾರು ಗ್ರಾಮಸ್ಥರ ಆಕ್ರೋಶ, ಪ್ರತಿಭಟನೆ

ಮೂಡುಬಿದಿರೆ: ಉಡುಪಿ- ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿ ಸಂಬಂಧಪಟ್ಟಂತೆ ಉಡುಪಿ-ಕಾಸರಗೋಡು ಟ್ರಾನ್ಸ್ ಮಿಶನ್ ಕಂಪನಿ ಲಿ. (ಯುಕೆಟಿಎಲ್) ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ, ತೆಂಕಮಿಜಾರು ಗ್ರಾಮದ ಕೃಷಿ ಭೂಮಿಯನ್ನು ನಾಶಪಡಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಸ್ಥರು, ಭಾರತೀಯ ಕಿಸಾನ್ ಸಂಘದ ಜಂಟಿಯಾಗಿ ಸಂತ್ರಸ್ತ ಕೃಷಿ ಭಾಸ್ಕರ್ ಶೆಟ್ಟಿ ಅವರ ಜಾಗದಲ್ಲಿ ಪ್ರತಿಭಟನೆ ನಡೆಸಿ, ಕಂಪೆನಿಯ ದೌರ್ಜನ್ಯ ಹಾಗೂ ಸರಕಾರದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಮಾತನಾಡಿ, ಮೂಡುಬಿದಿರೆ ಭಾಗದಲ್ಲಿ ಕೃಷಿ ಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ, ವಿದ್ಯುತ್ ಸಂಪರ್ಕ ಸಹಿತ ವಿವಿಧ ಜನ ವಿರೋಧಿ ಯೋಜನೆಗಳಿಂದಾಗಿ ರೈತರ ಸಂಕಷ್ಟವನ್ನು ಅನುಭವಿಸುವಂತಾಗಿದೆ. ತಾಲೂಕಿನ ಒಂಬತ್ತು ಗ್ರಾಮ ಗಳಲ್ಲಿ ಹಾದು ಹೋಗುತ್ತದೆ. ಭಾಸ್ಕರ್ ಶೆಟ್ಟಿ, ಸಂಜೀವ ಗೌಡ, ರಾಜೇಶ್ ಭಂಡಾರಿ, ಮಿಜಾರುಗುತ್ತು ಪ್ರವೀಣ್ ರೈ, ಜಾನ್ ರೆಬೆಲ್ಲೊ, ಜೆಸಿಂತಾ ಸಹಿತ ಹಲವು ಮಂದಿ ಕೃಷಿಕರು ದೌರ್ಜನ್ಯದಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ತಂತಿ ಹೋಗುವ ಪ್ರದೇಶದವರಿಗೆ ನೋಟೀಸ್ ಆಗಲೀ ಪರಿಹಾರವನ್ನಾಗಲೀ ನೀಡಿಲ್ಲ. ಸರಕಾರ ರೈತ ವಿರೋಧಿ ನೀತಿಯನ್ನು ಬಿಟ್ಟು ಇದಕ್ಕೆ ಶೀಘ್ರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ರೈತರನ್ನು ಸೇರಿಸಿಕೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂತ್ರಸ್ತ ಭಾಸ್ಕರ್ ಶೆಟ್ಟಿ ಮಾತನಾಡಿ, ನಮ್ಮ ಫಲವತ್ತಾದ ಜಮೀನು ಒತ್ತುವರಿಗೆ ಯಾವುದೇ ಆದೇಶವಾಗಿಲ್ಲ. ಒಂದು ಟವರ್ ನಿರ್ಮಾಣಕ್ಕಾಗಿ ಫಲವತ್ತಾದ ಕೃಷಿ ನಾಶಮಾಡುವಂತೆಯೂ ಆದೇಶಗಳಾಗಿಲ್ಲ. ಆದರೂ. ಕಂಪೆನಿ ಪೊಲೀಸ್ ಬಲ ಪ್ರಯೋಗಿಸಿ ಬಲಾತ್ಕಾರವಾಗಿ ನಮ್ಮ ಭೂಮಿಯನ್ನು ನಮ್ಮಿಂದ ಕಸಿಯುತ್ತಿದ್ದಾರೆ. ಪೊಲೀಸರು ಬೆದರಿಕೆಯೊಡ್ಡಿ ಸಹಿ ಹಾಕಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ರೈತರ ಫಲವತ್ತಾದ ಬೆಳೆ ತೆಗೆಯುವ ಕೃಷಿ ಭೂಮಿ ಯನ್ನು ಈ ಯೋಜನೆಗಾಗಿ ಯಾವುದೇ ಕಾರಣಕ್ಕೂ ಒತ್ತುವರಿ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭ ತೆಂಕಮಿಜಾರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಸದಸ್ಯ ವಿದ್ಯಾನಂದ ಮಿಜಾರು ದೋಟ ಸುರೇಶ್ ಶೆಟ್ಟಿ, ಪ್ರಮುಖರಾದ ವಸಂತ್ ಭಟ್, ಇರುವೈಲು ದೊಡ್ಡಗುತ್ತು ದಿನೇಶ್ ಶೆಟ್ಟಿ, ಜಾನ್ ರೆಬೆಲ್ಲೊ, ಜೆಸಿಂತಾ ಸಹಿತ ಗ್ರಾಮಸ್ಥರು ಭಾಗವಹಿಸಿದರು.
"ಉಡುಪಿ- ಕಾಸರಗೋಡು ನಡುವೆ ಹಾದು ಹೋಗುವ 440 ಕೆವಿ ವಿದ್ಯುತ್ ಲೈನ್ ಕಾಮಗಾರಿಯಿಂದಾಗಿ ಸಂಬಂಧ ಪಟ್ಟಂತೆ ಒಳ ಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆ ವಿದ್ಯುತ್ ತಂತಿ ಹಾದು ಹೋಗುವ ಸಲುವಾಗಿ ಒಂದು ಟವರ್ ನಿರ್ಮಾಣಕ್ಕಾಗಿ ತೋಟಕ್ಕೆ ಜೆಸಿಬಿ ಹರಿಸಿ ಸುಮಾರು 150 ಕ್ಕೂ ಅಧಿಕ ಅಡಿಕೆ ಮರಗಳು, ಅರ್ಧೆಕರೆಯಷ್ಟು ಕಬ್ಬನ ಬೆಳೆ ನಾಸವಾಗಿದೆ. ಅಡಿಕೆ ಮತ್ತು ಕಬ್ಬಿನ ತೋಟಕ್ಕೆ ಅಳವಡಿಸಲಾಗಿದ್ದ ಪೈಪ್ ಲೈನ್ ಸಂಪೂರ್ಣ ಕಿತ್ತುಹಾಕಲಾಗಿದೆ".
- ಭಾಸ್ಕರ ಶೆಟ್ಟ, ಸಂತ್ರಸ್ತ ರೈತ







