ಮರ್ಹೂಮ್ ಮಿತ್ತಬೈಲ್ ಉಸ್ತಾದ್‌ರ ಪತ್ನಿ ನಿಧನ
ಬಂಟ್ವಾಳ : ಮಿತ್ತಬೈಲು ಉಸ್ತಾದ್ ಎಂದೇ ಚಿರಪರಿಚಿತರಾಗಿದ್ದ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಅವರ ಪತ್ನಿ ಸಕೀನಾಬಿ (63) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಬಂಟ್ವಾಳ ತಾಲೂಕು ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ, ಎಸ್ಕೆಎಸ್ಸೆಸ್ಸೆಫ್ ಪ್ರಮುಖ ನೇತಾರ ಇರ್ಶಾದ್ ದಾರಿಮಿ ಅಲ್-ಜಝರಿ ಸಹಿತ 10 ಮಂದಿ ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗ, ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಬುಧವಾರ ಬೆಳಿಗ್ಗೆ 9 ಗಂಟೆಯ ವೇಳೆಗೆ ಪರ್ಲಿಯಾ ಅರಫಾ ಜುಮಾ ಮಸೀದಿ ಬಳಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇವರ 10 ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ಪತಿಯಂದಿರೂ ಕೂಡಾ ಧಾರ್ಮಿಕ ಗುರುಗಳಾಗಿದ್ದು, ಪಂಡಿತ ಕುಟುಂಬವಾಗಿದೆ. ಶೈಖುನಾ ಜಬ್ಬಾರ್ ಉಸ್ತಾದ್ ಅವರು ಏಳು ವರ್ಷಗಳ ಹಿಂದೆ ಇದೇ ಜುಮಾದಿಲ್ ಅವ್ವಲ್ ತಿಂಗಳ ಚಾಂದ್ 2 ರಂದು ಮಗ್ರಿಬ್ ಬಳಿಕ ನಿಧನರಾಗಿದ್ದು, ಕಳೆದ ಶುಕ್ರವಾರ ಹಾಗೂ ಶನಿವಾರ ಈ ಎರಡು ದಿನಗಳಲ್ಲಿ ಅವರ 7ನೇ ಆಂಡ್ ನೇರ್ಚೆ ಪ್ರಯುಕ್ತ ಅನುಸ್ಮರಣಾ ಕಾರ್ಯಕ್ರಮ ನಡೆದಿದೆ. 7 ವರ್ಷಗಳ ಬಳಿಕ ಅವರ ಪತ್ನಿ ಸಕೀನಾಬಿ ಅವರು ಅದೇ ಜುಮಾದಿಲ್ ಅವ್ವಲ್ ತಿಂಗಳ ಚಾಂದ್ 5 ರಂದು ಮಗ್ರಿಬ್ ಬಳಿಕ ನಿಧನರಾಗಿದ್ದಾರೆ.
ಮೂಲತಃ ಕಿಲ್ತಾನ್ ದ್ವೀಪದ ಬೆಂದಂ ಇಲ್ಲಂ ತರವಾಡಿನ ಮುಹಮ್ಮದ್ ಕೋಯ ಹಾಗೂ ಹಬ್ಸಾಬೀ ಅವರ ಪ್ರಥಮ ಪುತ್ರಿಯಾಗಿರುವ ಸಕೀನಾಬಿ ಅವರು ಶೈಖುನಾ ಜಬ್ಬಾರ್ ಉಸ್ತಾದರನ್ನು ವಿವಾಹವಾದ ಬಳಿಕ ಬಿ.ಸಿ.ರೋಡು ಸಮೀಪದ ಮಿತ್ತಬೈಲಿಗೆ ಬಂದು ಕಳೆದ ಸುಮಾರು 48 ವರ್ಷಗಳಿಂದ ನೆಲೆಸಿದ್ದರು.
ಇವರ ನಿಧನಕ್ಕೆ ಹಲವು ಮಂದಿ ಧಾರ್ಮಿಕ ಪಂಡಿತರ ಸಹಿತ, ಸಾಮಾಜಿಕ, ರಾಜಕೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.







