ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಕೊಣಾಜೆ: ಜಮೀಯ್ಯತುಲ್ ಫಲಾಹ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಸಲ್ಪಡುವ ಕೊಣಾಜೆ ಅಡ್ಕರೆಪಡ್ಪುವಿನಲ್ಲಿ ರುವ ಗ್ರೀನ್ ವ್ಯೂ ವಿದ್ಯಾಸಂಸ್ಥೆಯಲ್ಲಿ ಎಲ್‌ಕೆಜಿ ತರಗತಿಯ ಉದ್ಘಾಟನೆ ಹಾಗೂ ಎಸೆಸ್ಸೆಲ್ಸಿ ಮತ್ತು ಪಿಯುಸಿ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವು ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಈಶ್ವರ್ ಮಾತನಾಡಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆ ಯನ್ನು ಶ್ಲಾಘನೀಯ. ಸಂಸ್ಥೆಯ ಮುಂದಿನ ಶೈಕ್ಷಣಿಕ ಯೋಜನೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿ ಸಲಾಯಿತು. ಎರಡೂ ವಿಭಾಗಗಳಲ್ಲಿ ಶೇ.100 ಫಲಿತಾಂಶ ದಾಖಲಿಸಲು ಶ್ರಮಿಸಿದ ಎಲ್ಲಾ ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಲಾಯಿತು.
ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ಕಾರ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಮೀಯ್ಯತುಲ್ ಫಲಾಹ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಅಬ್ದುನಾಸಿರ್ ಕೆ.ಕೆ., ಮಂಗಳೂರು ನಗರ ಪಾಲಿಕೆ ಘಟಕದ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಕೋಶಾಧಿಕಾರಿ ವಿ. ಇಬ್ರಾಹಿಂ ಹಾಜಿ, ಮಾಜಿ ಜಿಲ್ಲಾಧ್ಯಕ್ಷ ಶಬೀಹ್ ಅಹ್ಮದ್ ಖಾಝಿ, ಅನಿವಾಸಿ ಭಾರತೀಯ ಘಟಕಗಳ ಅಧ್ಯಕ್ಷರಾದ ಶೈಖ್ ಸೌದ್, ಮುಹಮ್ಮದ್ ಫಾರೂಕ್, ಅಬ್ದುಲ್ ಹಮೀದ್ ವೆಂಜ್, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಮಾಲತಿ, ಮುಹಿಯುದ್ದಿನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಅಲ್ ಎಹ್ಸಾನ್ ಸಂಸ್ಥೆಯ ಅಧ್ಯಕ್ಷ ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ಪರ್ವೇಝ್ ಅಲಿ ಸ್ವಾಗತಿಸಿದರು. ಪ್ರಾಂಶುಪಾಲ ಅಬೂಬಕ್ಕರ್ ಕೆ. ವಂದಿಸಿದರು. ಮುಖ್ಯ ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿದರು.






