ಕೂಳೂರು: ಯೆನೆಪೊಯ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ

ಸುರತ್ಕಲ್ : ನಗರದ ಕೂಳೂರಿನಲ್ಲಿರುವ ಯೆನಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮೇನೇಜ್ಮೆಂಟ್ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭವು ಬುಧವಾರ ಕಾಲೇಜಿನ ವೈಎಂಕೆ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರು, ಜವಾಬ್ದಾರಿಯುತ ನಾಯಕತ್ವವೇ ಇಂದಿನ ಸಮಾಜದ ಅಗತ್ಯವಾಗಿದೆ. ಯುವಸಮುದಾಯವು ದೇಶದ ಭವಿಷ್ಯವಾಗಿದ್ದು, ನಾಯಕತ್ವದ ಗುಣಗಳನ್ನು ಇಂದಿನಿಂದಲೇ ಬೆಳೆಸಿಕೊಳ್ಳಬೇಕು. ಮಾದಕದ್ರವ್ಯ ಜಾಲದ ವಿರುದ್ಧ ಜಾಗೃತಿ ಮೂಡಿಸಿದ ಅವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಗೌರವ ಅತಿಥಿಯಾಗಿ ಆಗಮಿಸಿದ್ದ ಯೇನಪೋಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಡಾ. ಮಾಜಿ ಜೋಸ್ ಮಾತನಾಡಿ, ವಿದ್ಯಾರ್ಥಿ ನಾಯಕರು ವಿನಯ, ಆತ್ಮವಿಶ್ವಾಸ, ಐಕ್ಯತೆಯ ಬಲದೊಂದಿಗೆ ಕಾರ್ಯನಿರ್ವಹಿಸಬೇಕು. ಕಾಲೇಜು ಆವರಣವನ್ನು ರ್ಯಾಗಿಂಗ್ ಹಾಗೂ ಮಾದಕದ್ರವ್ಯ ಮುಕ್ತ ವಾತಾವರಣ ವನ್ನಾಗಿ ಮಾಡಲು ಸಂಸತ್ ಮುಂಚೂಣಿಯಲ್ಲಿರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಜೀವನ್ ರಾಜ್ ಅವರು ಮಾತನಾಡಿ, ಸಂಸ್ಥೆಯ ಗೌರವ ಹಾಗೂ ಘನತೆಯನ್ನು ಎತ್ತಿಹಿಡಿಯುವುದು ವಿದ್ಯಾರ್ಥಿ ನಾಯಕರ ಕರ್ತವ್ಯ. ನಿಜವಾದ ನಾಯಕತ್ವ ಸೇವೆಯಲ್ಲಿ ಅಡಗಿದೆ ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಪ್ರಾಂಶುಪಾಲರು ನೂತನವಾಗಿ ಆಯ್ಕೆಯಾದ 55 ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನೂತನ ಅಧ್ಯಕ್ಷೆ ಆಯಿಷಾ ಅಝ್ಝಾ ಸಂಸ್ಥೆಯ ಅಭಿವೃದ್ಧಿಯ ತಮ್ಮ ಕನಸುಗಳನ್ನು ಹಂಚಿ ಕೊಂಡರು. ವೇದಿಕೆಯಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಹಾಗೂ ಉಪ ಪ್ರಾಂಶುಪಾಲರಾದ ಪ್ರೊ. ಶರೀನಾ ಪಿ., ಉಪಪ್ರಾಂಶುಪಾಲ ನಾರಾಯಣ ಸುಕುಮಾರ್ ಎ. ಮತ್ತು ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮಾನ್ ತಹಾನಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಇಸ್ಮಾಯಿಲ್ ರಿಹಾನ್ ಅವರ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿನಾಕಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ರೇಷ್ಮಾ ಧನ್ಯವಾದ ಸಮರ್ಪಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






