ಚಾರಿತ್ರ್ಯವಂತ ಮಕ್ಕಳೇ ಹೆತ್ತವರಿಗೆ ಆಸ್ತಿ : ಸುಮಂತ್ ಕುಮಾರ್ ಜೈನ್

ಕಾರ್ಕಳ : ವಿದ್ಯಾರ್ಥಿಗಳು ಉತ್ತಮ ಚಾರಿತ್ರ್ಯವನ್ನು ರೂಡಿಸಿಕೊಳ್ಳಿ, ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದು ಚಾರಿತ್ರ್ಯ. ಉತ್ತಮ ಚಾರಿತ್ರ್ಯವುಳ್ಳ ಮಕ್ಕಳೇ ಹೆತ್ತವರಿಗೆ ಆಸ್ತಿ. ಇಂತಹ ಮಕ್ಕಳನ್ನು ಪಡೆದ ಪೋಷಕರೇ ಧನ್ಯರು ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹೇಳಿದರು.
ಅವರು "ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್" ವತಿಯಿಂದ ಕಾರ್ಕಳದ ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ 90 ÷ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಷರ್ಸ್ ಅಸೋಸಿಯೇಷನ್(ರಿ) ಬೆಂಗಳೂರು ಇದರ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡುತ್ತಾ ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಶೆಟ್ಟಿ ಅವರಂತ ಆದರ್ಶ ಯುವಕರು ಈ ಸಮಾಜಕ್ಕೆ ಆಸ್ತಿ. ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಉದ್ಯಮಿ ಯತಾರ್ಥ್ ಸೋಶಿಯಲ್ ಇದರ ಸ್ಥಾಪಕ ಈಶ್ವರ್ ಪ್ರಸಾದ್ ಶೆಟ್ಟಿ ಅವರು ಮಾತನಾಡುತ್ತಾ ಅಮ್ಮನ ಹೆಸರಿನಲ್ಲಿ ನೀಡುತ್ತಿರುವ ಈ ವಿದ್ಯಾರ್ಥಿ ವೇತನ ಭಾವನಾತ್ಮಕ ಕಾರ್ಯ ಕ್ರಮವಾಗಿದೆ. ಇದನ್ನು ಪಡೆದ ವಿದ್ಯಾರ್ಥಿಗಳು ಮುಂದೆ ತಾವು ಇನ್ನೊಬ್ಬರಿಗೆ ನೀಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕಾಗಿದೆ ಎಂದರು.
ಪರಿಸರದ ವಿವಿಧ ಶಿಕ್ಷಣ ಸಂಸ್ಥೆಗಳ ಹತ್ತನೇ ತರಗತಿಯ 28 ಹಾಗೂ ಪಿಯುಸಿಯ 16 ವಿದ್ಯಾರ್ಥಿಗಳಿಗೆ ಅನುಕ್ರಮ ವಾಗಿ ತಲಾ ರೂ. 5,000 ಹಾಗೂ 10,000 ದಂತೆ ವಿದ್ಯಾರ್ಥಿ ವೇತನ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳನ್ನು ಮೊಬೈಲ್ ನಿಂದ ದೂರ ಉಳಿಸಿ ಮಕ್ಕಳು ಹಾಗೂ ಪೋಷಕರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕೆಂಬ ಉದ್ದೇಶದಿಂದ 12,000 ಸರಕಾರಿ ಶಾಲಾ ಮಕ್ಕಳಿಗೆ ಪ್ರತಿ ತಿಂಗಳು ದಾನಿಗಳ ನೆರವಿನಿಂದ ಉಚಿತ ವಾಗಿ ನೀಡುವ" ಕರಾವಳಿ ನಾಡಿ" ಪತ್ರಿಕೆಯನ್ನು ಸಂಪಾದಕರು ಅತಿಥಿಗಳಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಹೋಟೆಲ್ ಮಯೂರದ ಮಾಲಕರಾದ ಉದಯ ಕುಮಾರ್, ಬಾಲಾಜಿ ಜ್ಯುವೆಲ್ಲರ್ಸ್ ಬಜಗೋಳಿಯ ಯಶವಂತ ಆಚಾರ್ಯ, ಕರಾವಳಿ ನಾಡಿ ಪತ್ರಿಕೆಯ ಸಂಪಾದಕ ಬಾಲಕೃಷ್ಣ ಭೀಮಗುಳಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಗಣೇಶ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಸ್ವಾಗತಿಸಿದರು. ವಿಶ್ರಾಂತ ಮುಖ ಶಿಕ್ಷಕ ವಸಂತ್ ಎಂ ನಿರೂಪಿಸಿ ವಂದಿಸಿದರು.






