ಎಂಆರ್‌ಪಿಎಲ್ ದುರಂತ: ಸಮಗ್ರ ತನಿಖೆಗೆ ಡಿವೈಎಫ್‌ಐ ಒತ್ತಾಯ

ಮಂಗಳೂರು, ಸೆ.30: ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದ ಸಿಎಸ್‌ಟಿ ಮೂರನೇ ಪ್ಲಾಂಟ್‌ನಲ್ಲಿ ಬುಧವಾರ ಸಂಭವಿಸಿದ ಭಾರೂ ಸ್ಫೋಟ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‌ಐ ಆಗ್ರಹಿಸಿದೆ.
ಎಂಆರ್‌ಪಿಎಲ್ ವಿಸ್ತರಿತ ಯೋಜನೆ ಕೋಕ್ ಸಲ್ಫರ್ ಘಟಕವು ಆರಂಭಗೊಂಡಾಗಲೇ ಡಿವೈಎಫ್‌ಐ ವಿರೋಧಿ ಸಿತ್ತು. ಆದರೆ ಸರಕಾರವು ಈವರೆಗೂ ಈ ಬಗ್ಗೆ ಮೌನ ವಹಿಸಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದೆ.
ಅಪಾಯಕಾರಿ ಕೈಗಾರಿಕೆಗಳು ಸ್ಥಾಪನೆಯಾಗುವಾಗ ಸರಕಾರವು ಅಪಾಯದ ಮೌಲ್ಯ ಮಾಪನ ನಡೆಸಬೇಕು. ಅನ್ವಯಿಸುವ ಕೈಗಾರಿಕೆಗಳಲ್ಲಿ ಅಪಾಯಕಾರಿ ರಾಸಾಯನಿಕಗಳ ಸಂಗ್ರಹ, ಬಳಕೆ ಮತ್ತು ನಿರ್ವಹಣೆಗೆ ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು. ತೀವ್ರ ನಿಗಾ ವ್ಯವಸ್ಥೆಯು ಆ ಕೈಗಾರಿಕಾ ವಲಯದ ಒಳಗಡೆ ಇರು ವಂತೆ ನೋಡಿಕೊಳ್ಳಬೇಕು. ಆದರೆ ಸರಕಾರ ಇಂತಹ ಪ್ರಮುಖ ಅಂಶಗಳನ್ನು ಕಡೆಗಣಿಸಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು. ದುರಂತಕ್ಕೆ ಎಂಆರ್‌ಪಿಎಲ್ ಕಂಪೆನಿಯನ್ನು ಹೊಣೆಗಾರನನ್ನಾಗಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪರಿಸರ ಮತ್ತು ಜೀವ ಹಾನಿ ಹಾಗೂ ಕಟ್ಟಡ, ಮನೆಗಳ ಹಾನಿಗೆ ನಷ್ಟ ಭರ್ತಿಯನ್ನು ಕಂಪನಿಯು ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಮನೋಜ್ ವಾಮಂಜೂರು ಮತ್ತು ಕಾರ್ಯದರ್ಶಿ ರಿಝ್ವಾನ್ ಹರೇಕಳ ಒತ್ತಾಯಿಸಿದ್ದಾರೆ.




