ಅತ್ತಾವರ: ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ; ಅಪಾರ ಹಾನಿ

ಮಂಗಳೂರು, ನ.9: ನಗರದ ಅತ್ತಾವರದ ವಾಣಿಜ್ಯ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಸೋಮವಾರ ನಡೆದಿದೆ. ಇದರಿಂದ ಭಾರೀ ಹಾನಿ ಸಂಭವಿಸಿರುವುದಾಗಿ ವರದಿಯಾಗಿದೆ.
ಹೊಟೇಲ್ ಮತ್ತು ವಸತಿ ವ್ಯವಸ್ಥೆ ಹೊಂದಿರುವ 4 ಮಹಡಿಯ ಈ ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ 3ನೇ ಮಹಡಿಯಲ್ಲಿದ್ದ ವಸತಿಗೃಹದ ರೂಮಿನಿಂದ ಹೊಗೆ ಕಾಣಿಸಿಕೊಂಡಿತ್ತು. ಹಾಗೇ ಕ್ಷಣ ಮಾತ್ರದಲ್ಲಿ ಬೆಂಕಿ ಹಬ್ಬಿ ಕೊಂಡಿದೆ. ತಕ್ಷಣ ವಸತಿ ಗೃಹದ ಸಿಬ್ಬಂದಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಕಾರ್ಯಾಚರಣೆ ಆರಂಭಿಸಿದ ಪಾಂಡೇಶ್ವರದ ಅಗ್ನಿಶಾಮಕ ಸಿಬ್ಬಂದಿ ವರ್ಗವು ಬೆಂಕಿ ನಂದಿಸಿದೆ.
ಬೆಂಕಿ ಅನಾಹುತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಏರ್ಕಂಡೀಷನ್ನಲ್ಲಿ ಶಾರ್ಟ್ ಸರ್ಕೀಟ್ ಆಗಿರುವ ಸಾಧ್ಯತೆ ಯಿದೆ ಎನ್ನಲಾಗಿದೆ. ಈ ಘಟನೆಯಿಂದ ರೂಮಿನಲ್ಲಿದ್ದ ಬೆಡ್ಡ್, ಪೀಠೋಪಕರಣ ಮತ್ತಿತರ ವಸ್ತುಗಳು ಸುಟ್ಟು ಹೋಗಿವೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಗ್ನಿ ಶಾಮಕಾಧಿಕಾರಿ ನವಾಜ್, ಠಾಣಾಧಿಕಾರಿ ಪ್ರವೀಣ್, ಸಹಾಯಕ ಅಗ್ನಿ ಶಾಮಕ ಅಧಿಕಾರಿ ಜಯ ಮತ್ತಿತರರು ಪಾಲ್ಗೊಂಡಿದ್ದರು.




