ಮಂಗಳೂರು: ಜೈಲಿನಲ್ಲಿದ್ದ 45ಕ್ಕೂ ಅಧಿಕ ಖೈದಿಗಳು ಅಸ್ವಸ್ಥ
ಆಸ್ಪತ್ರೆಗೆ ದಾಖಲು

ಮಂಗಳೂರು, ಮಾ.5: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಸುಮಾರು 45 ಮಂದಿ ವಿಚಾರಣಾಧೀನ ಖೈದಿಗಳು ಅಸ್ವಸ್ಥಗೊಂಡ ಘಟನೆ ಬುಧವಾರ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಮಧ್ಯಾಹ್ನ ಊಟದ ಬಳಿಕ ಖೈದಿಗಳು ಹೊಟ್ಟೆನೋವು, ವಾಂತಿ ಭೇದಿಯಿಂದ ಬಳಲಿದ್ದಾರೆ. ತಕ್ಷಣ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಖೈದಿಗಳಿಗೆ ಅವಲಕ್ಕಿ, ಅನ್ನ ಸಾಂಬಾರು ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಕಲುಷಿತ ಆಹಾರದಿಂದ ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಅಸ್ವಸ್ಥಗೊಂಡಿರುವವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರ ಆರೋಗ್ಯ ಸ್ಥಿರವಾಗಿದೆ. ಕಾರಾಗೃಹಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನೀರು, ಆಹಾರದ ಮಾದರಿಯ ಪರೀಕ್ಷೆ ನಡೆಸಿದ್ದಾರೆ. ಕಾರಾಗೃಹದಲ್ಲಿ ಸುಮಾರು 350 ಮಂದಿ ವಿಚಾರಣಾಧೀನ ಖೈದಿಗಳಿದ್ದಾರೆ. ಸಂಜೆಯವರೆಗೆ ಸುಮಾರು 45 ಮಂದಿ ಅಸ್ವಸ್ಥಗೊಂಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.







