ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲು ಉಲಮಾ ಕೋ ಆರ್ಡಿನೇಷನ್ ಒತ್ತಾಯ

ಅಬ್ದುಲ್ ರಹ್ಮಾನ್
ಮಂಗಳೂರು: ಬಂಟ್ವಾಳದ ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಅಬ್ದುಲ್ ರಹ್ಮಾನ್ ಎಂಬ ಅಮಾಯಕ ಯುವಕನ ಹತ್ಯೆಯನ್ನು ಉಲಮಾ ಕೋ ಆರ್ಡಿನೇಶನ್ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಮೃತರ ಕುಟುಂಬಕ್ಕೆ ಐವತ್ತು ಲಕ್ಷ ರೂ. ಹಾಗೂ ದುಷ್ಕರ್ಮಿಗಳಿಂದ ದಾಳಿಗೊಳಗಾದ ಖಲಂದರ್ ಶಾಫಿಯವರಿಗೆ ಉಚಿತ ಚಿಕಿತ್ಸೆ ಹಾಗೂ ಹತ್ತು ಲಕ್ಷ ರೂ. ಪರಿಹಾರ ನೀಡಬೇಕೆಂದು ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ಕಮಿಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದಿ ಹಂತಕ ಪರಿವಾರ ನಡೆಸುತ್ತಿರುವ ಅಮಾಯಕರ ಹತ್ಯಾ ಸರಣಿ ನಿರಂತರವಾಗಿ ಮುಂದುವರಿಯುತ್ತಿದೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ, ಕೊಲೆಗೆ ಪ್ರಚೋದಿಸುವ ಭಾಷಣಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕಬೇಕಾದ ಸರಕಾರವು ಕಣ್ಣು ಮುಚ್ಚಿ ಕುಳಿತು ಬಾಹ್ಯ ಬೆಂಬಲ ನೀಡುತ್ತಿದೆ. ಉಗ್ರಗಾಮಿ, ಕೋಮುವಾದಿಗಳಿಗೆ ಸರಕಾರ ಪೊಲೀಸರ ಮೂಲಕ ರಕ್ಷಣೆ ನೀಡುತ್ತಿದೆ. ಇದರಿಂದಾಗಿ ಹಂತಕರು, ರೌಡಿಗಳು ನಿರ್ಭೀತವಾಗಿದ್ದಾರೆ. ಆದ್ದರಿಂದ ಕೊಲೆ ಪ್ರಕರಣಗಳು ನಿರಂತರ ಮುಂದುವರಿಯುತ್ತಿದ್ದು, ಇದಕ್ಕೆ ಸರಕಾರವೇ ಹೊಣೆ ಎಂದು ಉಲಮಾ ಕೋ ಆರ್ಡಿನೇಷನ್ ಕಮಿಟಿ ಆರೋಪಿಸಿದೆ.
ದ.ಕ. ಜಿಲ್ಲೆಯಲ್ಲಿ ಕಾನೂನು ರಕ್ಷಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. 'ಆಂಟಿ ಕಮ್ಯೂನಲ್ ಫೋರ್ಸ್' ಕೇವಲ ಗೃಹ ಸಚಿವರ ಕಾಟಾಚಾರದ ಘೋಷಣೆಗೆ ಸೀಮಿತವಾಗಿದ್ದು, ಸರಕಾರವು ಮುಸ್ಲಿಮರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಉಲಮಾ ಸಮನ್ವಯ ಸಮಿತಿ ದೂರಿದೆ.
ಈ ಬಗ್ಗೆ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ವರ್ಚುಯಲ್ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಉಸ್ಮಾನುಲ್ ಫೈಝಿ ತೋಡಾರ್, ಕಾರ್ಯದರ್ಶಿಗಳಾದ ಡಾ.ಝೖನಿ ಕಾಮಿಲ್, ಅಬ್ದುಲ್ ಅಝೀಝ್ ದಾರಿಮಿ, ಕೋಶಾಧಿಕಾರಿ ಶಾಫಿ ಸಅದಿ ಬೆಂಗಳೂರು, ಸದಸ್ಯರಾದ ಉಮರ್ ದಾರಿಮಿ ಸಾಲ್ಮರ, ಸಿದ್ದೀಕ್ ದಾರಿಮಿ ಕಡಬ, ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಹಮೀದ್ ದಾರಿಮಿ ಸಂಪ್ಯ, ಕೆ.ಎಲ್.ದಾರಿಮಿ ಪಟ್ಟೋರಿ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಪಿ.ಪಿ.ಅಹ್ಮದ್ ಸಖಾಫಿ ಕಾಶೀಪಟ್ನ, ಸಿದ್ದೀಕ್ ಕೆ.ಎಂ.ಮೊಂಟುಗೋಳಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಅಬ್ದುಲ್ ರಹ್ಮಾನ್ ರಝ್ವಿ ಉಡುಪಿ, ಮಲ್ಲೂರು ಅಶ್ರಫ್ ಸಅದಿ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಮುಂತಾದವರು ಪಾಲ್ಗೊಂಡಿದ್ದರು.







