ದ.ಕ. ಜಿಲ್ಲೆಯಲ್ಲಿ ಶೀಘ್ರವೇ ಹೊಸ 6 ಇಂದಿರಾ ಕ್ಯಾಂಟೀನ್‌ಗಳು ಆರಂಭ: ದಿನೇಶ್ ಗುಂಡೂರಾವ್

ಮಂಗಳೂರು, ಜೂ.4: ದ.ಕ. ಜಿಲ್ಲೆಯಲ್ಲಿ ಹೊಸತಾಗಿ 10 ಇಂದಿರಾ ಕ್ಯಾಂಟೀನ್‌ಗಳನ್ನು ವಿವಿಧ ಕಡೆಗಳಲ್ಲಿ ಈ ಅವಧಿಯಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ನಾಲ್ಕು ಸಿದ್ಧಗೊಂಡಿದ್ದು, ಮೂರು ಉದ್ಘಾಟನೆಯಾಗಿದೆ. ಇನ್ನುಳಿದ ಆರು ಕ್ಯಾಂಟೀನ್‌ಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಿನ್ನಿಗೋಳಿಯಲ್ಲಿ ನೂತನ ಇಂದಿರಾ ಕ್ಯಾಂಟೀನನ್ನು ಬುಧವಾರ ಉದ್ಘಾಟಿಸಿದ ಬಳಿಕ ಕಿನ್ನಿಗೋಳಿ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಚರ್ಚ್ ಸಭಾಂಗಣದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಜ್ಪೆಯಲ್ಲಿಯೂ ನೂತನ ಇಂದಿರಾ ಕ್ಯಾಂಟೀನ್ ಇಂದು ಉದ್ಘಾಟನೆಯಾಗಬೇಕಿತ್ತು. ಕಾಮಗಾರಿ ಬಾಕಿ ಇರುವುದರಿಂದ ಶೀಘ್ರದಲ್ಲೇ ಉದ್ಘಾಟನೆ ನಡೆಯಲಿದೆ. ಜತೆಗೆ ಉಳಿದ ಆರು ಕ್ಯಾಂಟೀನ್‌ಗಳೂ ತೆರೆಯುವ ಮೂಲಕ 25 ರೂ.ಗಳಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಲಭ್ಯವಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಜವಾಬ್ಧಾರಿಯ ಜತೆಗೆ ಸಾರ್ವಜನಿ ಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು ಸರಕಾರದ ಜವಾಬ್ಧಾರಿ. ಖಾತಾ, ಪ್ಲಾಟಿಂಗ್‌ನಲ್ಲಾಗುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ವ್ಯವಸ್ಥೆ ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾ ಗುವುದು ಎಂದು ಸಚಿವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಮಾತನಾಡಿ, ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರು ತಾಲೂಕು ಮಟ್ಟದಲ್ಲಿ ಅಹವಾಲು ಸಭೆ ನಡೆಸಿ ಸ್ಪಂದಿಸುತ್ತಿದ್ದಾರೆ. ಅಧಿಕಾರಿಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡದೆ, ವರ್ಗಾವಣೆ ವಿಷಯದಲ್ಲಿ ಕೈಹಾಕದೆ, ಪಕ್ಷಬೇಧ ಮರೆತು ಕೆಲಸ ಮಾಡುತ್ತಾರೆ. ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಇಂದಿರಾ ಗಾಂಧಿಯವರು ಗರೀಬಿ ಹಠಾವೊ ಮೂಲಕ ದೇಶದಲ್ಲಿ ಕ್ರಾಂತಿ ಮಾಡಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಹಸಿವು ಮುಕ್ತ ಕಾರ್ಯಕ್ರಮವನ್ನು ನೀಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕರಲ್ಲಿ ಮೂರು ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೊಳ್ಳುತ್ತಿದೆ. ಬಡವರಿಗೆ 5 ರೂ.ನಲ್ಲಿ ಉಪಹಾರ, 10 ರೂ.ನಲ್ಲಿ ಊಟದ ವ್ಯವಸ್ಥೆ ಇದರಿಂದ ಸಿಗುತ್ತಿದೆ. ಇದರ ಜತೆಗೆ ಕ್ಷೇತ್ರಕ್ಕೆ ಅನುದಾನದ ಕೊರತೆ ಇದೆ. ರಸ್ತೆ, ಕಿಂಡಿ ಅಣೆಕಟ್ಟಿನ ಬೇಡಿಕೆ ಇರಿಸಿಕೊಂಡು ಜನ ನಮ್ಮ ಬಳಿ ಬರುತ್ತಿದ್ದಾರೆ. ಸಂಬಂಧಪಟ್ಟ ಇಲಾಖಾ ಸಚಿವರ ಜತೆ ಮಾತನಾಡಿ ಹೆಚ್ಚಿನ ಅನುದಾನ ಒದಗಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಸಚಿವರಿಗೆ ಮನವಿ ಮಾಡಿದರು.
ವೇದಿಕೆಯಲ್ಲಿ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ಯಾರಂಟಿ ಯೋಜನಾ ನಿರ್ದೇಶಕಿ ಜಯಲಕ್ಷ್ಮಿ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಚರ್ಚ್‌ನ ಧರ್ಮಗುರು ವಂ. ಜೋಕಿಂ ಫೆರ್ನಾಂಡಿಸ್, ಸಹಾಯಕ ಆಯುಕ್ತ ಹರ್ಷವರ್ದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಅಹವಾಲು ಸಭೆಯಲ್ಲಿ ನೂರಾರು ದೂರುಗಳು
ರಸ್ತೆ, ಹಾಸ್ಟೆಲ್ ಸೇರಿದಂತೆ ಕ್ಷೇತ್ರದ ವಿವಿಧ ಬೇಡಿಕೆಗಳ ಕುರಿತಂತೆ ಅಹವಾಲು ಸಭೆಯಲ್ಲಿ ಸಾರ್ವಜನಿಕ ರಿಂದ ಅವಹಾಲುಗಳನ್ನ ಸಚಿವರಿಗೆ ಸಲ್ಲಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಥಳದಲ್ಲಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದರು.