ಜು.14ರಂದು ಎಸ್ ವೈ ಎಸ್ 'ಸೌಹಾರ್ದ ಸಂಚಾರ'ಕ್ಕೆ ಚಾಲನೆ

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲ ಜಾತಿ ಮತಗಳ ಜನರನ್ನು ಸೇರಿಸಿ ನಡೆಸುವ 'ಸೌಹಾರ್ದ ಸಂಚಾರ'ಕ್ಕೆ ಜು.14ರಂದು ಬೆಳಗ್ಗೆ 9ಗಂಟೆಗೆ ಕುಂದಾಪುರದಲ್ಲಿ ಚಾಲನೆ ನೀಡಲಾಗುವುದು.
ಸೈಯದ್ ಕೋಟೇಶ್ವರ ತಂಙಳ್ ಝಿಯಾರತ್ ಮೂಲಕ ಚಾಲನೆ ನೀಡಲಿದ್ದು, ಧರ್ಮಗುರು ರೆ.ಫಾ. ನೋವೆಲ್ ಬ್ರಹ್ಮಾವರ್, ಪತ್ರಕರ್ತ ಶಶಿಧರ ಹೆಮ್ಮಾಡಿ ಭಾಗವಹಿಸುವರು. ಶಾಸ್ತ್ರೀ ಪಾರ್ಕ್‌ನಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಉದ್ಘಾಟಿಸುವರು. ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 12 ಗಂಟೆಗೆ ಉಡುಪಿ ನಗರದಲ್ಲಿ ನಡೆಯುವ ಜಾಥಾ ಮತ್ತು ಸಾರ್ವಜನಿಕ ಸಭೆಯಲ್ಲಿ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್, ಬೈಂದೂರು ಹಲಗೇರಿ ಜೋಗಿ ಮನೆಯ ಶ್ರೀ ವಸಂತನಾಥ ಗುರೂಜಿ, ನ್ಯಾಯವಾದಿ ಹಂಝತ್ ಹೆಜಮಾಡಿ ಮಾತನಾಡುವರು.
ಅಪರಾಹ್ನ 3.30ಕ್ಕೆ ಕಾರ್ಕಳ ತಲುಪಲಿರುವ ಸೌಹಾರ್ದ ಸಂಚಾರದಲ್ಲಿ ಧರ್ಮಗುರುಗಳಾದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಚಾರ್ಯ ಮಹಾಸ್ವಾಮಿ, ಡಾ. ಝೈನಿ ಕಾಮಿಲ್, ಎಸ್ ವೈ ಎಸ್ ರಾಜ್ಯ ಕೋಶಾಧಿಕಾರಿ ಮನ್ಸೂರ್ ಕೋಟೆಗದ್ದೆ ಸೌಹಾರ್ದ ಸಂದೇಶ ನೀಡುವರು.
ಸಂಜೆ 5.30ಕ್ಕೆ ಕಾಪುವಿನಲ್ಲಿ ಶ್ರೀ ಶ್ರೀ ಗುರೂಜಿ ಶಂಕರಪುರ ಮಠ, ರೆ.ಫಾ. ಸುಧೀರ್ ಪ್ರಕಾಶ್, ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ, ಜಿಲ್ಲಾ ಉಪಾಧ್ಯಕ್ಷ ಯಾಕೂಬ್ ಸಅದಿ ನಾವೂರು ಮಾತನಾಡುವರು.
ರಾತ್ರಿ 8ಕ್ಕೆ ಪಡುಬಿದ್ರೆಯಲ್ಲಿ ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ರಖೀಬ್ ಕನ್ನಂಗಾರ್ ಸೌಹಾರ್ದ ಸಂದೇಶ ನೀಡಲಿದ್ದಾರೆ ಎಂದು ಸಂಚಾರ ಸಮಿತಿ ಕಾರ್ಯದರ್ಶಿ ಹಸೈನಾರ್ ಆನೆಮಹಲ್ ತಿಳಿಸಿದ್ದಾರೆ.







