366 ದಿನಗಳ ನಿತ್ಯ ವೀಡಿಯೋ ಚಾಲೆಂಜ್: ಮುರ್ಶಿದ್ ಅಹ್ಮದ್ ಕುಪ್ಪೆಟ್ಟಿ ದಾಖಲೆ

ಮಂಗಳೂರು: 366 ದಿನಗಳ ನಿರಂತರ ನಿತ್ಯ ವೀಡಿಯೋ ಚಾಲೆಂಜ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬೆಳ್ತಂಗಡಿಯ ಮುರ್ಶಿದ್ ಅಹ್ಮದ್ ಕುಪ್ಪೆಟ್ಟಿ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದಲ್ಲಿರುವ ದಾರುನ್ನೂರ್ ಶಿಕ್ಷಣ ಕೇಂದ್ರದ ವಿದ್ಯಾರ್ಥಿಯಾಗಿರುವ 18 ವರ್ಷದ ಮುರ್ಶಿದ್ ಅಹ್ಮದ್ 2023ರ ನವೆಂಬರ್ 1ರಿಂದ 2024ರ ಅಕ್ಟೋಬರ್ 31ರವಗಿನ ಅವಧಿಯಲ್ಲಿ ಈ ವೀಡಿಯೊ ದಾಖಲೆ ಸೃಷ್ಟಿಸಿದ್ದಾರೆ. ಈ ಅವಧಿಯಲ್ಲಿ ಅವರು ಪ್ರತೀ ದಿನ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಪಂಚದ ಪ್ರಮುಖ ದಿನಗಳ ಬಗ್ಗೆ ಮಾಹಿತಿಯುತ ವೀಡಿಯೋಗಳನ್ನು ಸೃಷ್ಟಿಸಿ ಹಂಚಿಕೊಂಡು ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ಗುರುತಿಸಿ ಪ್ರಮಾಣಪತ್ರ ನೀಡಿವೆ.
366 ದಿನಗಳ ಈ ವೀಡಿಯೊ ಚಾಲೆಂಜ್ ಪ್ರತಿದಿನ ಹೊಸ ವಿಷಯಗಳನ್ನು ಒಳಗೊಂಡಿದ್ದು, ಕೇವಲ ದಾಖಲೆಗಾಗಿ ಮಾಡಿದ್ದಲ್ಲ. ಜ್ಞಾನ ಹಂಚಿಕೆ ಮತ್ತು ವಿಶ್ವದ ಪ್ರಮುಖ ದಿನಗಳ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮುರ್ಶಿದ್ ಅವರ ಈ ದಾಖಲೆ 2024ರ ಲೀಪ್ ಡೇ (ಫೆಬ್ರವರಿ 29) ಅನ್ನು ಒಳಗೊಂಡಿರುವುದರಿಂದ 2028ರವರೆಗೆ ಈ ದಾಖಲೆ ಸರಿಗಟ್ಟಲು ಸಾಧ್ಯವಿಲ್ಲ ಎಂಬುದು ವಿಶೇಷ.
ಮುರ್ಷಿದ್ ಅವರು ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ನಿವಾಸಿ ಕೆ.ಮುಹಮ್ಮದ್ ಕುಪ್ಪೆಟ್ಟಿ ಮತ್ತು ಝೈನಬು ದಂಪತಿಯ ಪುತ್ರ.