ಡಿ.5ರಂದು ‘ಉಮೀದ್ ’ನಲ್ಲಿ ವಖ್ಫ್ ಸಂಸ್ಥೆಗಳ ಮಾಹಿತಿ ಸಲ್ಲಿಸಲು ಕೊನೆಯ ದಿನ
ಮಂಗಳೂರು, ಅ.26: ವಖ್ಫ್ ಕಾಯ್ದೆ 2025ರ ಸೆಕ್ಷನ್ 3ಬಿಯ ಪ್ರಕಾರ ಎಲ್ಲ ವಖ್ಫ್ ಸಂಸ್ಥೆಗಳು ವಖ್ಫ್ ಕಾಯ್ದೆ ಅಂಗೀಕಾರಗೊಂಡ ಆರು ತಿಂಗಳ ಒಳಗಾಗಿ ತಮ್ಮ ಸ್ವತ್ತು ಮತ್ತು ಇತರ ವಿವರಗಳನ್ನು ಕೇಂದ್ರ ಸರಕಾರದ ಉಮೀದ್ ಎಂಬ ಪೋರ್ಟಲ್‌ನಲ್ಲಿ ಮಾಹಿತಿ ಸಲ್ಲಿಸಬೇಕಾಗಿದೆ. ಡಿಸೆಂಬರ್ 5, 2025 ಕೊನೆಯ ದಿನವಾಗಿದೆ.
ಮಾಹಿತಿಯನ್ನು ಉದ್ದೇಶ ಪೂರ್ವಕವಾಗಿ ಸಲ್ಲಿಸದೆ ಇರುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಪ್ರತಿ ಜಮಾತ್ ಕಮಿಟಿ ಯವರು ಈ ವಿಷಯ ವನ್ನು ಗಂಭೀರವಾಗಿ ಪರಿಗಣಿಸಿ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ಪೋರ್ಟಲ್‌ನಲ್ಲಿ ಸಲ್ಲಿಸುವ ಮೂಲಕ ವಖ್ಫ್ ನ ಮಾನ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾ ವಖ್ಫ್ ಕಚೇರಿಯಲ್ಲಿ ಮಾಹಿತಿಯನ್ನು ಸಲ್ಲಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಅ.29ರಿಂದ ಮಾಹಿತಿ ಸಲ್ಲಿಸಲು ಅವಕಾಶ ಇದೆ. ಪುತ್ತೂರು, ಬೆಳ್ತಂಗಡಿ ಹಾಗೂ ಮೂಡಬಿದ್ರಿ ತಾಲೂಕು ಕೇಂದ್ರದಲ್ಲಿ ವಖ್ಫ್ ಕಚೇರಿಯ ಸಹಕಾರದೊಂದಿಗೆ ಮಾಹಿತಿ ಸಲ್ಲಿಸುವ ಕೇಂದ್ರ ಶೀಘ್ರದಲ್ಲೇ ಆರಂಭವಾಗಲಿದೆ. ಈ ಸಮಯದಲ್ಲಿ ಮಸೀದಿ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಆಧಾರ್, ವೋಟರ್ ಐಡಿ, ಒಂದು ಭಾವಚಿತ್ರದ ಪ್ರತಿ ಹಾಗೂ ವಖ್ಫ್ ನೋಂದಣಿಯಾದ ದಾಖಲೆ ಪತ್ರಗಳ ಪ್ರತಿಯನ್ನು ತರಬೇಕಾಗಿದೆ ಎಂದು ದ.ಕ. ಜಿಲ್ಲಾ ವಖ್ಪ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







