ಸ್ವಚ್ಛತೆಗಾಗಿ ಪಾದಯಾತ್ರೆ ಹೊರಟ ಯುವಕ| ಕಾರವಾರದಿಂದ - ಮಂಗಳೂರಿಗೆ ‘ಹಸಿರು ನಡಿಗೆ’

ಮಂಗಳೂರು: ಸ್ವಚ್ಛ ಮಂಗಳೂರು ಎಂಬ ಪರಿಕಲ್ಪನೆಯೊಂದಿಗೆ ಹಲವು ವರ್ಷಗಳಿಂದ ವಿಶೇಷ ರೀತಿಯ ಅಭಿಯಾನಗಳ ಮೂಲಕ ಗಮನ ಸೆಳೆದಿರುವ ಮಂಗಳೂರಿನ ಪರಿಸರಾಸಕ್ತ ಯುವಕ ನಾಗರಾಜ್ ಬಜಾಲ್ ಮತ್ತೊಂದು ವಿಭಿನ್ನ ಅಭಿಯಾನ ಆರಂಭಿಸಿದ್ದಾರೆ.
‘ಹಸಿರು ನಡಿಗೆ- ಪ್ರತಿ ಹೆಜ್ಜೆ ಸ್ವಚ್ಛತೆಯೆಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರವಾರದಿಂದ ಮಂಗಳೂರಿಗೆ 300 ಕಿ.ಮೀ.ಗಳ ಪಾದಯಾತ್ರೆಯನ್ನು ಅವರು ಈ ಬಾರಿ ನಡೆಸುತ್ತಿದ್ದಾರೆ. ಕೈಯ್ಯಲ್ಲಿ ‘ಕಸ ಎಸೆಯಬೇಡಿ, ಕಸವನ್ನು ನಿರ್ವಹಣೆ ಮಾಡಿ’ ಎಂಬ ಫಲಕವನ್ನು ಹೊತ್ತು ಈ ಪಾದಯಾತ್ರೆಯ ಮೂಲಕ ಕರಾವಳಿ ತೀರದ ಗ್ರಾಮಗಳು, ಪಟ್ಟಣಗಳು ಹಾಗೂ ಜನರೊಂದಿಗೆ ಬೆರೆತು ಸ್ವಚ್ಛತೆಯ ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿದೆ.
ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರಲ್ಲಿ ಕಸ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಜತೆಗೆ ಸ್ಥಳೀಯವಾಗಿ ಅನುಸರಿಸಲ್ಪಡುವ ಉತ್ತಮ ಮಾದರಿಗಳನ್ನು ಗುರುತಿಸಿ ಇತರ ಪ್ರದೇಶಗಳಲ್ಲಿ ಅಳವಡಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದು ಕೂಡಾ ನಾಗರಾಜ್ ಬಜಾಲ್‌ರವರ ಅಭಿಯಾನದ ಗುರಿಯಾಗಿದೆ.
ಸಾಮಾಜಿಕ ಕಳಕಳಿಯಿಂದ ನಾಗರಾಜ್ ಬಜಾಲ್‌ರವರು ನಡೆಸುತ್ತಿರುವ ಹಸಿರು ನಡಿಗೆಗೆ ಅ.27ರಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಚಾಲನೆ ನೀಡಿದ್ದಾರೆ. ಅಲ್ಲಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಧಿಕಾರಿಗಳ ಜತೆ ಸಂವಾದ ನಡೆಸಿ ನಡಿಗೆ ಆರಂಭಿಸಿರುವ ನಾಗರಾಜ್ ಬಜಾಲ್‌ರವರು, ಉತ್ತರ ಕನ್ನಡದಿಂದ ಹೊರಟು ಕಾರವಾರ ಮೂಲಕ ಗೋಕರ್ಣ ಆಗಿ, ಅ. 28ರಂದು ಕುಮಟಾ ತಲುಪಿದ್ದಾರೆ. ಅಲ್ಲಿಂದ ಹೊನ್ನಾವರ, ಉಡುಪಿ ಮೂಲಕ ಮಂಗಳೂರಿಗೆ ನವೆಂಬರ್ 3ರೊಳಗೆ ತಲುಪುವ ಗುರಿ ಹೊಂದಿದ್ದಾರೆ.
‘ಕರಾವಳಿ ಪ್ರದೇಶದಲ್ಲಿ ಸಮುದ್ರಕ್ಕೆ ಹರಿದು ಹೋಗುವ ಪ್ಲಾಸ್ಟಿಕ್ ತ್ಯಾಜ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಮುಖ ಕಾರಣ ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ. ಅದಕ್ಕಾಗಿ ಪಂಚಾಯತ್‌ಗಳು, ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಪರಿಣಾಮಕಾರಿ ಕಸ ನಿರ್ವಹಣಾ ಕ್ರಮಗಳನ್ನು ತಿಳಿದುಕೊಳ್ಳು ಮತ್ತು ಹಂಚಿಕೊಳಳಲು ಈ ಯಾತ್ರೆ ಕೈಗೊಂಡಿದ್ದೇನೆ.’
-ನಾಗರಾಜ್ ಬಜಾಲ್







