ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವೀಡಿಯೊ ಶೇರ್ ಮಾಡಿದ ಆರೋಪ: ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಪೊಲೀಸ್ ವಶಕ್ಕೆ

ಶರಣ್ ಪಂಪ್ವೆಲ್
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವೀಡಿಯೋ ಶೇರ್ ಮಾಡಿದ ಆರೋಪದಲ್ಲಿ ವಿಶ್ವ ಹಿಂದೂ ಪರಿಷತ್ನ ಮುಖಂಡ ಶರಣ್ ಪಂಪ್ವೆಲ್ ಮತ್ತು ವಿಕಾಸ್ ಪಿ. ಎಂಬವರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದರಂತೆ ಕದ್ರಿ ಪೊಲೀಸರು ಇಬ್ಬರನ್ನೂ ಶುಕ್ರವಾರ ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಆರೆಸ್ಸೆಸ್ ಮುಖಂಡ ಮಾಡಿರುವ ಭಾಷಣದ ವೀಡಿಯೊ ತುಣುಕಿನೊಂದಿಗೆ, ಮುಸ್ಲಿಮರ ಜನಸಂಖ್ಯಾ ಜಿಹಾದ್ ಮೆಟ್ಟಿ ನಿಲ್ಲೋಣ ಎಂಬುದಾಗಿ ಬರೆದು ಶೇರ್ ಮಾಡಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟು ಹಾಕುವ, ಮುಸ್ಲಿಂ ಭಾವನೆಗೆ ದಕ್ಕೆ ಬರುವ ರೀತಿಯಲ್ಲಿ ಬರೆದು ಶೇರ್ ಮಾಡಿರುವುದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗಲಿದೆ ಎಂದು ಆರೋಪಿಸಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ವೀಡಿಯೊ ಶೇರ್ ಮಾಡಿದ ಆರೋಪದಲ್ಲಿ ಶರಣ್ ಪಂಪ್ವೆಲ್ನನ್ನು ಶುಕ್ರವಾರ ಕದ್ರಿ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡಾಗ ಯಾವುದೇ ನೋಟಿಸ್ ನೀಡದೆ ವಶಕ್ಕೆ ಪಡೆಯಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಹಾಗೂ ವಿಭಾಗ ಬಜರಂಗದಳ ಸಂಯೋಜಕ ಪುನೀತ್ ಅತ್ತಾವರ ಮತ್ತಿತರರು ಆಕ್ಷೇಪಿಸಿ ಠಾಣೆಯ ಮುಂದೆ ಜಮಾಯಿಸಿದ ಘಟನೆಯೂ ನಡೆಯಿತು.
*ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೇಲ್ ಪಡೆಯುವ ವೇಳೆ ನೀಡಿದ್ದ ಬಾಂಡನ್ನು ಮುಟ್ಟುಗೋಲು ಹಾಕುವ ಬಗ್ಗೆ ಪ್ರಕ್ರಿಯೆಗಳು ಆರಂಭವಾಗಿದೆ ಎಂದು ತಿಳಿಸಿದ್ದಾರೆ.







