ಮಂಗಳೂರು | ಕ್ಯಾಬ್ ಚಾಲಕನನ್ನು ʼಟೆರರಿಸ್ಟ್ʼ ಎಂದು ಅವಹೇಳನಗೈದ ಆರೋಪ: ಮಲಯಾಳಂ ನಟ ಜಯಕೃಷ್ಣನ್ ಸಹಿತ ಇಬ್ಬರ ಬಂಧನ

ನಟ ಜಯಕೃಷ್ಣನ್ (Photo: madhyamam.com)
ಮಂಗಳೂರು: ಕ್ಯಾಬ್ ಚಾಲಕನನ್ನು ʼಟೆರರಿಸ್ಟ್ʼ ಎಂದು ಅವಹೇಳನಗೈದ ಆರೋಪದ ಮೇರೆಗೆ ಮಲಯಾಳಂನ ಚಿತ್ರನಟ ಜಯಕೃಷ್ಣನ್ ಸಹಿತ ಇಬ್ಬರನ್ನು ನಗರದ ಉರ್ವ ಠಾಣೆಯ ಶನಿವಾರ ಬಂಧಿಸಿದ್ದಾರೆ.
ಅ.9ರಂದು ರಾತ್ರಿ ಕೇರಳದ ಸಂತೋಷ್ ಅಬ್ರಹಾಂ, ಜಯಕೃಷ್ಣನ್ ಮತ್ತು ವಿಮಲ್ ಎಂಬವರು Uber ಮತ್ತು Rapido Captain ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿ ನಗರದ ಬಿಜೈ ನ್ಯೂರೊಡ್ನ ಪಿಕ್ಅಪ್ ವಿಳಾಸ ನೀಡಿದ್ದರು. ಅದರಂತೆ ತಾನು ಕರೆ ಮಾಡಿ ಪಿಕ್ಅಪ್ ಬಗ್ಗೆ ವಿಚಾರಿಸಿದಾಗ ಆ ಕಡೆಯಿಂದ ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ ಮುಸ್ಲಿಂ ತೀವ್ರವಾದಿ, ಟೆರರಿಸ್ಟ್ ಎಂದು ಅವಹೇಳನಗೈದು ಮುಸ್ಲಿಮ್ ಟೆರರಿಸ್ಟ್ ಎಂದು ಹಿಂದಿ ಭಾಷೆಯಲ್ಲಿ ಬೊಬ್ಬೆ ಹಾಕಿದ್ದಲ್ಲದೆ ಮಲಯಾಳಂನಲ್ಲಿ ತಾಯಿಗೆ ಅವಾಚ್ಯವಾಗಿ ಬೈದಿರುವುದಾಗಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ಉರ್ವ ಠಾಣೆಗೆ ದೂರು ನೀಡಿದ್ದರು.
ಅದರಂತೆ ಅ.10ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 352, 353(2) ಬಿಎನ್ಎಸ್ರಂತೆ ಪ್ರಕರಣ ದಾಖಲಿಸಿದ ಪೊಲೀಸರು ಮಲಯಾಳಂನ ಚಿತ್ರನಟ ಜಯಕೃಷ್ಣನ್ ಮತ್ತು ಸಂತೋಷ್ ಅಬ್ರಹಾಂನನ್ನು ಬಂಧಿಸಿದ್ದಾರೆ.





