ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ಅಭಿವೃದ್ಧಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ

ಮಂಗಳೂರು: ನಗರದ ವೆನ್ಲಾಕ್ ಸರಕಾರಿ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ರಾಜ್ಯ ಸರಕಾರ ಹಸಿರು ನಿಶಾನೆ ನೀಡಿದ್ದು 10 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ಕಟ್ಟಡದಲ್ಲಿ ಹೆಚ್ಚುವರಿಯಾಗಿ 4 ಮತ್ತು 5ನೇ ಮಹಡಿಗಳನ್ನು ನಿರ್ಮಿಸಲು ಸರಕಾರದಿಂದ ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಈ ಯೋಜನೆಯು ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್ ) ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯ ಅಡಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಈ ನಿರ್ಮಾಣ ಕಾರ್ಯಕ್ಕಾಗಿ ಒಟ್ಟು 10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಆಸ್ಪತ್ರೆಯ ಸಾಮರ್ಥ್ಯ ವನ್ನು ವಿಸ್ತರಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಎಂಆರ್ಪಿಎಲ್ ಸಂಸ್ಥೆಯು ನೀಡಿರುವ ದೇಣಿಗೆಯಿಂದಾಗಿ ಕರಾವಳಿ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಉತ್ತಮ ಗುಣಮಟ್ಟದ ಚಿಕಿತ್ಸೆ ವೆನ್ಲಾಕ್ನಲ್ಲಿ ಲಭ್ಯವಾಗಲಿದೆ. ಸರಕಾರದ ಈ ಆದೇಶದಿಂದಾಗಿ ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವುದರಿಂದ ಆಸ್ಪತ್ರೆಯ ಅಭಿವೃದ್ಧಿಗೆ ವೇಗ ದೊರೆತಿದೆ.
*ಹೈಟೆಕ್ ಸ್ಪರ್ಶ :ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿಗೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಂಪೆನಿಗಳು ಕೈ ಜೋಡಿಸುತ್ತಿದೆ. ಆಸ್ಪತ್ರೆಯು ಖಾಸಗಿ ಆಸ್ಪತ್ರೆಗೆ ಸರಿಸಾಟಿಯಾಗಿ ಬೆಳೆಯುತ್ತಿದೆ. ರೋಗಿಗಳ ಸಂಖ್ಯೆಯು ದಿನದಿಂದ ಜಾಸ್ತಿಯಾಗು ತ್ತಿದ್ದು, ಹೊರ ಜಿಲ್ಲೆಗಳ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಉತ್ತಮ ಚಿಕಿತ್ಸೆ ದೊರೆಯುವ ಕಾರಣದಿಂದಾಗಿ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಮಂಗಳೂರಿನಲ್ಲಿ ಹಲವು ಆಸ್ಪತ್ರೆಗಳು ಇದ್ದರೂ ಅಲ್ಲಿ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದವರು, ಜಿಲ್ಲೆಯ ವಿವಿಧ ತಾಲೂಕುಗಳ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಕೈ ಸುಟ್ಟುಕೊಂಡವರು ಅಂತಿಮವಾಗಿ ವೆನ್ಲಾಕ್ಗೆ ಆಗಮಿಸಿ ಉತ್ತಮ ಚಿಕಿತ್ಸೆ ಪಡೆದು ವಾಪಸಾಗುತ್ತಿರುವ ಪ್ರಕರಣಗಳು ಗುಟ್ಟಾಗಿ ಉಳಿದಿಲ್ಲ.
*ಒಪಿಡಿ ಕಟ್ಟಡಕ್ಕೆ 70 ಕೋಟಿ ರೂ: ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗಕ್ಕೆ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 35 ಕೋಟಿ ರೂ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಗೆ ಸರಕಾರದಿಂದ ಆಡಳಿತಾತ್ಮಕ ಅನುಮತಿ ದೊರೆತಿದೆ.
ಜಯದೇವ, ಕಿದ್ವಾಯಿ ಘಟಕ ಸ್ಥಾಪನೆಗೆ ಬೇಡಿಕೆ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕಿದ್ವಾಯಿ ಸ್ನಾರಕ ಗೃಂಥಿ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂದು ಜನ ಸಾಮಾನ್ಯರು ಸರಕಾರವನ್ನು ಆಗ್ರಹಿಸಿದ್ದಾರೆ. ಈಗಾಗಲೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕಿದ್ವಾಯಿ ಸ್ನಾರಕ ಗೃಂಥಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪನೆಗೆ ವೆನ್ಲಾಕ್ ಆಸ್ಪತ್ರೆ ಬಳಿ ಮತ್ತು ಮೂಡುಶೆಡ್ಡೆ ಕ್ಷಯ ರೋಗ ಆಸ್ಪತ್ರೆಯ ಆವರಣಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಜಾಗದಲ್ಲಿ ಈ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ತಿಳಿದು ಬಂದಿದೆ.







