ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಪೊಲೀಸ್ ಕಾರು ಬಳಸಿಲ್ಲ: ಪೊಲೀಸ್ ಆಯುಕ್ತರ ಸ್ಪಷ್ಟನೆ

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಅಡ್ಯಾರ್ ಕಣ್ಣೂರಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ | ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್
ಮಂಗಳೂರು, ಎ.19: ಅಡ್ಯಾರ್ ಕಣ್ಣೂರು ಬಳಿಯ ಶಾ ಗಾರ್ಡನ್ ಮೈದಾನದಲ್ಲಿ ಶುಕ್ರವಾರ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭ ಪೊಲೀಸ್ ಅಧಿಕಾರಿಯ ಸರಕಾರಿ ಕಾರನ್ನು ಪ್ರತಿಭಟನಾಕಾರರು ಬಳಸಿರುವುದಾಗಿ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದ್ದು, ಇದು ಸುಳ್ಳು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ.
ಪ್ರತಿಭಟನೆಯ ಸಂದರ್ಭ ಬಂದೋಬಸ್ತಿನಲ್ಲಿದ್ದ ಎಸಿಪಿ (ಸಂಚಾರ ಉಪ ವಿಭಾಗ)ಯವರು ಕಾರ್ಯಕ್ರಮ ಮುಗಿದ ಬಳಿಕ ಮಂಗಳೂರು ಕಡೆಗೆ ತೆರಳುವ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು. ಈ ವೇಳೆ ಟೆಂಪೋ ಟ್ರಾವೆಲರ್ ವಾಹನವೊಂದು ಚಾಲಕನ ಅಜಾಗರೂಕತೆಯ ಚಾಲನೆ ಕಾರಣ 16 ವರ್ಷ ಬಾಲಕನೋರ್ವನಿಗೆ ಢಿಕ್ಕಿ ಹೊಡೆದು ಕಾಲಿಗೆ ಗಾಯವಾಗಿತ್ತು. ಈ ಸಂದರ್ಭ ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಗಾಯಾಳುವಿನ ಕಡೆಯವರು ಎಸಿಪಿಯವರ ಕಾರನ್ನು ನಿಲ್ಲಿಸಿ, ಗಾಯಾಳುವನ್ನು ಚಿಕಿತ್ಸೆಗಾಗಿ ಎಸಿಪಿಯವರಿದ್ದ ಕಾರಿನಲ್ಲಿ ಕಳುಹಿಸಿದ್ದಾರೆ. ಗಾಯಾಳುವನ್ನು ಅಡ್ಯಾರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಟೆಂಪೋ ಟ್ರಾವೆಲರ್ ವಶಕ್ಕೆ ಪಡೆದು, ಚಾಲಕನನ್ನು ಠಾಣೆಗೆ ಕಳುಹಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ರಸ್ತೆ ಅಪಘಾತ ಸಂಭವಿಸಿದ ವೇಳೆ ಸಂಚಾರ ದಟ್ಟಣೆಯಿಂದ ಗಾಯಾಳುವನ್ನು ಚಿಕಿತ್ಸೆ ಕೊಡಿಸುವ ಸಲುವಾಗಿ ಎಸಿಪಿಯವರ ವಾಹನದಲ್ಲಿ ಸಾಗಿಸಲಾಗಿದೆ. ಅಪಘಾತದಂತಹ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸುವುದು ಪೊಲೀಸರ ಕರ್ತವ್ಯ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.