ಮಾತೆ ಮರಿಯಮ್ಮನವರ ಜನ್ಮದಿನಕ್ಕೆ ರಜೆ ಘೋಷಿಸಲು ಕ್ರೈಸ್ತ ಸಂಘಟನೆಯಿಂದ ಮನವಿ

ಮಂಗಳೂರು: ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಪ್ರಮುಖ ಧಾರ್ಮಿಕ ಹಬ್ಬವಾದ ಮಾತೆ ಮರಿಯಮ್ಮನವರ ಜನ್ಮದಿನದ ಅಂಗವಾಗಿ ಸೆ. 8ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಜೆ ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ಕ್ರೈಸ್ತ ಸಂಘಟನೆ ಮನವಿ ಸಲ್ಲಿಸಿದೆ.
ಕರ್ನಾಟಕ ಕ್ರೈಸ್ತ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಸ್ಟ್ಯಾನಿ ಪಿಂಟೋ ಮತ್ತು ಅಖಿಲ ಭಾರತ ಕ್ಯಾಥೋಲಿಕ್ ಯೂನಿಯನ್ (AICU) ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜಾ ಪಾನೀರ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಕುಟುಂಬ ಮತ್ತು ಆರೋಗ್ಯ ಸಚಿವ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಸಮುದಾಯದ ಪರವಾಗಿ ಮನವಿ ಸಲ್ಲಿಸಲಾಯಿತು.
ಕ್ಯಾಥೋಲಿಕ್ ಕ್ರೈಸ್ತ ಸಮುದಾಯವು ಪ್ರತಿವರ್ಷ ಸೆ.8ರಂದು ಮಾತೆ ಮರಿಯಮ್ಮನವರ ಜನ್ಮದಿನವನ್ನು ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸುತ್ತದೆ. ಹಬ್ಬದ ಅಂಗವಾಗಿ ಎಂಟು ದಿನಗಳ ಕಾಲ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿ, ಅಂತಿಮ ದಿನವಾದ ಸೆ. 8ರಂದು ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಹಬ್ಬವನ್ನು ಆಚರಿಸಿ ಭೋಜನ ಸವಿಯುವ ಸಂಪ್ರದಾಯವೂ ಇದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಥೋಲಿಕ್ ಕ್ರೈಸ್ತರು ವಾಸಿಸುತ್ತಿದ್ದು, ಮಾತೆ ಮರಿಯಮ್ಮನವರ ಜನ್ಮದಿನವನ್ನು ಅವರ ಧಾರ್ಮಿಕ ಸಂಪ್ರದಾಯದಂತೆ ಆಚರಿಸಲು ಸೆ. 8ರಂದು ರಜೆ ನೀಡಬೇಕೆಂಬ ಬೇಡಿಕೆಯನ್ನು ಸಮುದಾಯವು ಹಲವು ವರ್ಷಗಳಿಂದ ಸರ್ಕಾರದ ಮುಂದಿಡುತ್ತಿದೆ.
ಇತರ ಸಮುದಾಯಗಳ ಪ್ರಮುಖ ಹಬ್ಬಗಳಿಗೆ ರಜೆ ಘೋಷಿಸಲಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಕ್ಯಾಥೋಲಿಕ್ ಸಮುದಾಯದ ಪ್ರಮುಖ ಹಬ್ಬವಾದ ಮಾತೆ ಮರಿಯಮ್ಮನವರ ಜನ್ಮದಿನಕ್ಕೆ ಸೆ. 8ರಂದು ರಜೆ ಘೋಷಿಸುವಂತೆ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕ್ರೈಸ್ತ ಸಂಘಟನೆಯ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.






