ಅಡಿಕೆ ಎಲೆ ಹಳದಿ ರೋಗ | ಇಸ್ರೋ- ಸಿಪಿಸಿಆರ್‌ಐ ತಂಡದಿಂದ ಸುಳ್ಯದಲ್ಲಿ ಡ್ರೋನ್ ಸಮೀಕ್ಷೆ: ಸಂಸದ ಕ್ಯಾ. ಚೌಟ

ಮಂಗಳೂರು, ನ.16: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಅಡಿಕೆ ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು, ಅಡಿಕೆ ಬೆಳೆ ಹಳದಿ ರೋಗ ಬಾಧಿತ ಸುಳ್ಯ ತಾಲೂಕಿನಲ್ಲಿ ಹಳದಿ ರೋಗದ ಲಕ್ಷಣ, ಪ್ರಸರಣ ಹಾಗೂ ವ್ಯಾಪ್ತಿ ಮುಂತಾದವಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದಕ್ಕೆ ಸುಧಾರಿತ ಡ್ರೋನ್ ಆಧಾರಿತ ವೈಮಾನಿಕ ಸಮೀಕ್ಷಾ ಕಾರ್ಯವನ್ನು ಆರಂಭಿಸಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಕರ್ನಾಟಕದ ಅಡಿಕೆ ಬೆಳೆಯುವ ಜಿಲ್ಲೆಗಳ ಸಂಸದರು, ರಾಜ್ಯದ ಸಚಿವರು, ಅಡಿಕೆ ಬೆಳೆಗಾರರ ಸಂಸ್ಥೆಗಳನ್ನು ಒಳಗೊಂಡ ಜಂಟಿ ನಿಯೋಗವು ದೆಹಲಿಯಲ್ಲಿ ಕೃಷಿ ಸಚಿವ ಶಿವರಾಜ್ ಚೌಹಾಣ್ ಅವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿತ್ತು. ಈ ವೇಳೆ ಸಂಸದ ಕ್ಯಾ. ಚೌಟ ಅವರು ಕೂಡ ಎಲೆ ಚುಕ್ಕೆ ಹಾಗೂ ಹಳದಿ ರೋಗ ಸೇರಿದಂತೆ ಅಡಿಕೆ ಬೆಳೆಗೆ ಕಾಡುತ್ತಿರುವ ಹಲವು ಸಮಸ್ಯೆಗಳಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದು, ಅವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮಾನವಿ ಮಾಡಿದ್ದರು. ಈ ವೇಳೆ ಜಂಟಿ ನಿಯೋಗವು ಅಡಿಕೆ ಹಳದಿ ಎಲೆ ಶಿಲೀಂದ್ರ ಮತ್ತು ಇತರ ರೋಗಗಳಿಂದ ದೀರ್ಘಾವಧಿಯ ಅಧ್ಯಯನ ಮಾಡಲು ಮತ್ತು ಪರಿಹಾರ ಕಂಡುಹಿಡಿಯಲು ಪ್ರತಿಷ್ಟಿತ ಸಂಶೋಧನಾ ಸಂಸ್ಥೆಯಿಂದ ಸಮಗ್ರ ಅಧ್ಯಯ ನಡೆಸಬೇಕೆಂದು ಸಚಿವರ ಮುಂದಿಟ್ಟಿತ್ತು. ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರವು ನಿಯೋಗವನ್ನು ಕಳುಹಿಸಿದೆ.
ಕೇಂದ್ರ ಸರ್ಕಾರ ನಿರ್ದೇಶನದಂತೆ ಕಾಸರಗೋಡಿನಲ್ಲಿರುವ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ), ಬೆಂಗಳೂರಿನ ಇಸ್ರೋ ಸಂಶೋಧನಾ ವಿಭಾಗ ಹಾಗೂ ಹೈದರಾಬಾದ್‌ನ ಇಸ್ರೋ ವೈಮಾನಿಕ ವಿಭಾಗ (ಇಸ್ರೋ ಏರಿಯಲ್ ವಿಂಗ್)ವು ಜಂಟಿಯಾಗಿ ಈ ಸರ್ವೆ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ತಂಡವು ಸುಳ್ಯ ತಾಲೂಕಿನ ಆರಂತೋಡು ಮತ್ತು ಪೆರಾಜೆ ಗ್ರಾಮದಲ್ಲಿ ಡ್ರೋನ್ ಸಮೀಕ್ಷೆ ನಡೆಸುತ್ತಿದೆ. ಈ ಎರಡು ಪ್ರದೇಶಗಳ ಒಟ್ಟು 2.5 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಸುಧಾರಿತ ಡ್ರೋನ್ ಮೂಲಕ ಅಡಿಕೆ ಮರಗಳ ಎಲೆಗಳ ಫೋಟೊ ಮತ್ತು ವಿಡಿಯೋ ಸೆರೆಹಿಡಿಯಲಾಗುತ್ತದೆ. ಇಲ್ಲಿನ ಚಿತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗುತ್ತದೆ. ಈ ಮೂಲ ಚಿತ್ರಗಳನ್ನು ಬೇಸ್ ಆಗಿ ಪರಿಗಣಿಸಿ ಅದನ್ನು ಇಸ್ರೋದ ಉಪಗ್ರಹಕ್ಕೆ(ಸೆಟಲೈಟ್) ದತ್ತಾಂಶವಾಗಿ ನೀಡಿ, ಆ ಮೂಲಕ ಕೇವಲ ಪ್ರಾಯೋಗಿಕ ಪ್ರದೇಶವಲ್ಲದೆ, ದೊಡ್ಡ ವ್ಯಾಪ್ತಿಯಲ್ಲಿ ಒಟ್ಟು ಅಡಿಕೆ ಎಲೆ ಹಳದಿ ರೋಗ ಪೀಡಿತ ಪ್ರದೇಶಗಳ ಸಮಗ್ರ ಸಮೀಕ್ಷೆ ನಡೆಯಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.
ಅಡಿಕೆ ಬೆಳೆಗೆ ಬಾಧಿಸಿರುವ ಎಲೆ ಹಳದಿ ರೋಗ ಸಮಸ್ಯೆ ಪರಿಹಾರಕ್ಕೆ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ಈ ಸಮೀಕ್ಷೆಯಲ್ಲಿ ವೈಜ್ಞಾನಿಕ ಹಾಗೂ ನಿಖರ ಅಂಕಿ-ಅಂಶಗಳು ದೊರೆಯಲಿದೆ. ಅಲ್ಲದೆ, ಎಲೆ ಹಳದಿ ರೋಗ ಪೀಡಿತ ಅಡಿಕೆ ಮರಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆಯೂ ನಿರಂತರ ನಿಗಾ ವಹಿಸಲಾಗುತ್ತದೆ. ಅಡಿಕೆ ಬೆಳೆಗೆ ಆಗುವ ರೋಗ ಪ್ರಸರಣದ ವೇಗ ಹಾಗೂ ವ್ಯಾಪ್ತಿ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ ಎಂದು ಸಂಸದ ಕ್ಯಾ. ಚೌಟ ತಿಳಿಸಿದ್ದಾರೆ.







